ಶುಕ್ರವಾರ, ಏಪ್ರಿಲ್ 24, 2015

ಸಿರಿಸಂಪಿಗೆ ನಾಟಕದಲ್ಲಿ ಸಾಕ್ಷಾತ್ಕಾರಗೊಂಡ ದೇಶಿಯ ರಂಗಭೂಮಿ ಪ್ರಜ್ಞೆ
 


ಸಿರಿಸಂಪಿಗೆ ನಾಟಕದ ಮುಖಪುಟ
  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಚಂದ್ರಶೇಖರ್ ಕಂಬಾರರ ಸಿರಿಸಂಪಿಗೆ ನಾಟಕವು ದೇಶಿಯ ರಂಗಭೂಮಿಯ ಸಾಧ್ಯತೆಗಳನ್ನು ಪ್ರಬಲವಾಗಿ ಚರ್ಚಿಸುತ್ತದೆ. ಯಕ್ಷಗಾನದ ತಂತ್ರದ ಮೂಲಕ ಸಾಕ್ಷಾತ್ಕಾರಗೊಳ್ಳುವ ನಾಟಕದ ವಸ್ತು ಜನಪದ ಕಥೆಯನ್ನೆ ಆಧರಿಸಿದೆ. ರೂಪಕ ಪ್ರಧಾನವಾದ, ಪ್ರತಿಮಾ ವಿಧಾನದಿಂದ ಸಿರಿಸಂಪಿಗೆ ನಾಟಕವು ಪಾಶ್ಚಾತ್ಯ ರಂಗಕೃತಿಗಿಂತ ಭಿನ್ನವಾಗಿದೆ. ಕನ್ನಡ ನಾಟಕಗಳಲ್ಲಿ ದೇಶಿಯತೆಯನ್ನು ಕಟ್ಟಬೇಕು, ಅದಕ್ಕಾಗಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾದ ಯಕ್ಷಗಾನದಂತಹ ಪ್ರಬಲ ಜನಪದ ಮಾಧ್ಯಮವನ್ನು ಬಳಸಿಕೊಳ್ಳಬೇಕೆಂಬುದು ಕಂಬಾರರ ಅಭಿಪ್ರಾಯ.
 
  ವಿಮರ್ಶಕ ಟಿ.ಪಿ ಅಶೋಕ್ ರವರ ಪ್ರಕಾರ ಸಿರಿಸಂಪಿಗೆ ಸಕಲ ಬಂಧದ ಸಂಕೀರ್ಣವಾದ ನಾಟಕ. ನಾಟಕದ ನಾಯಕ ಶಿವನಾಗದೇವ ಕನಸಿನಲ್ಲಿ ಕಂಡ ಕನ್ಯೆಯು ತನ್ನಲ್ಲಿ ಐಕ್ಯಗೊಂಡಿದ್ದಾಳೆ, ಆದರಿಂದ ಆಕೆಯನ್ನು ವಿವಾಹವಾಗಲು ತನ್ನ ದೇಹವನ್ನು ಎರಡಾಗಿ ಸೀಳಿಕೋಳ್ಳುತ್ತಾನೆ. ಹುಣ್ಣಿಮೆಯ ದಿನ ಸೀಳಿಕೊಂಡ ದೇಹ, ತುಂಬಿಟ್ಟ ಮಡಿಕೆಯೊಂದರಿಂದ ಕಾಳಿಂಗನೆಂಬ ಸರ್ಪವು, ಮತ್ತೊಂದರಿಂದ ಶಿವನಾಗದೇವನು ಹೊರಬರುತ್ತಾನೆ. ಆ ಮೂಲಕ ದೇಹ ಮತ್ತು ಮನಸ್ಸು ಪ್ರತ್ಯೇಕಗೊಳ್ಳುತ್ತದೆ. ತಾನು ಪ್ರೀತಿಸಿದ ಕನಸಿನ ಕನ್ಯೆಯನ್ನು ಶಿವನಾಗದೇವ ಮತ್ತೆ ಮತ್ತೆ ಹುಡುಕಾಡಲು ಪ್ರಯತ್ನಿಸುತ್ತಾನೆ. ಸೀಳಿಕೊಳ್ಳುವ ಮೂಲಕ ಜೀವಸತ್ವದ ಚೈತನ್ಯದಿಂದ ವಂಚಿತನಾಗುತ್ತಾನೆ.

  ತಾಯಿಯ ಅಣತಿಯಂತೆ ಇಷ್ಟವಿಲ್ಲದಿದ್ದರು ಸಿರಿಸಂಪಿಗೆ ಎಂಬ ಚೆಂದುಳ್ಳಿ ಚೆಲುವೆಯನ್ನು ವಿವಾಹವಾಗಿ, ಮುಂದೆ ಸಂಭವಿಸುವ ದುರಂತಗಳಿಗೆ ಕಾರಣನಾಗುತ್ತಾನೆ. ಶಿವನಾಗ ದೇವ ಸಿರಿಸಂಪಿಗೆಗೆ ನೀಡದಿರುವ ಸಾಂಸಾರಿಕ ಸುಖವನ್ನು, ತಾಯ್ತನವನ್ನು, ಪ್ರೀತಿಯನ್ನು ಶಿವನಾಗದೇವನಿಂದ ಛಿದ್ರಗೊಂಡ ಕಾಮಸ್ವರೂಪಿಯಾದ ಕಾಳಿಂಗ ಸರ್ಪವು ನೀಡುವ ಮೂಲಕ ನಾಟಕ ಹೊಸದೊಂದು ತಿರುವನ್ನು ಪಡೆದುಕೊಳ್ಳುತ್ತದೆ. ಮನುಷ್ಯನ ಅಸ್ಥಿತ್ವದ ಬಗ್ಗೆ ಇಡೀ ನಾಟಕ ಪ್ರಶ್ನಿಸುತ್ತದೆ.
 
  ಎ.ಕೆ.ರಾಮಾನುಜನ್ ಅವರು ಹೇಳಿದ ಜನಪದ ಕಥೆಯೊಂದರ ಸಣ್ಣ ಎಳೆಯನ್ನಿಟ್ಟುಕೊಂಡು, ಚಂದ್ರಶೇಖರ ಕಂಬಾರರು ಸಿರಿ ಸಂಪಿಗೆಯನ್ನು, ಗಿರೀಶ್ ಕಾರ್ನಾಡರು ನಾಗಮಂಡಲ ನಾಟಕವನ್ನು ರಚಿಸಿದರು. ಎರಡು ನಾಟಕಗಳ ವಸ್ತು ವಿಷಯ ಒಂದೇ. ಆದರೂ ನಿರೂಪಣಾ ಶೈಲಿ, ತಂತ್ರ ಧೋರಣೆ ಭಿನ್ನವಾಗಿರುವುದನ್ನು ಕಂಡುಕೊಳ್ಳಬಹುದು.
 
  ಕಂಬಾರರ ಸಿರಿಸಂಪಿಗೆ ನಾಟಕದ ಜೀವಪರತೆ ಇರುವುದು ದೇಶಿಯತೆಯ ನೆಲೆಯಲ್ಲಿ. ಯಕ್ಷಗಾನದ ಭಾಗವತಿಕೆ ಹಾಗೂ ಮೇಳದವರ ಮಾದರಿಯಲ್ಲಿ ಸಿರಿಸಂಪಿಗೆ ನಾಟಕ ಅಭಿವ್ಯಕ್ತಗೊಂಡಿದೆ. ಭಾಗವತನನ್ನು ಭಗವಂತನ ಪ್ರತಿನಿಧಿ ಎಂದು ಕರೆಯುತ್ತಾರೆ. ಇಂತಹ ಭಾಗವತ ಸಿರಿಸಂಪಿಗೆ ನಾಟಕದಲ್ಲಿ ನಿರೂಪಕನಾಗಿ, ಪಾತ್ರಧಾರಿಯಾಗಿ, ಸಲಹೆಗಾರನಾಗಿ, ವಿಮರ್ಶಕನಾಗಿ ತನಗೆ ವಹಿಸಿದ, ನಾಟಕ ರಂಗದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದನ್ನು ಗುರುತಿಸಬಹುದಾಗಿದೆ.
 
ಚಂದ್ರಶೇಖರ ಕಂಬಾರ
  ಭಾಗವತ ಒಂದು ರೀತಿಯಲ್ಲಿ ಯಕ್ಷಗಾನದ ನಿರ್ದೇಶಕ. ನಾಟಕದ ಪಾತ್ರಧಾರಿಗಳು ತಮ್ಮ ಕಷ್ಟ ಸುಖಗಳನ್ನು ದೈವ ಸ್ವರೂಪಿಯಾದ ಭಾಗವತನಲ್ಲಿ ಅಭಿವ್ಯಕ್ತಿಸುತ್ತಾರೆ. ವಿಕ್ಷಕ ವೃಂದದಲ್ಲಿಯು, ಸಹೃದಯನಲ್ಲಿಯು ನಾಟಕದ ಕುರಿತಾಗಿ ಒಡಮೂಡುವ ಸಂಶಯಗಳನ್ನು, ಗೊಂದಲಗಳನ್ನು ಭಾಗವತ ಪರಿಹರಿಸುತ್ತಾನೆ.
 
  ಯಕ್ಷಗಾನದ ಕ್ರಮದಂತೆ ಆರಂಭದಲ್ಲಿ ನಿರ್ವಿಘ್ನವಾಗಿ ನಾಟಕದ ರಂಗಪ್ರಯೋಗಗೊಳ್ಳಲು ಪ್ರಾರ್ಥನೆಯನ್ನು ಭಾಗವತನೆ ಹಾಡುತ್ತಾನೆ. ಯಕ್ಷಗಾನದ ಒಡ್ಡೊಲಗದ ಪರಿಕಲ್ಪನೆಯ ಮೂಲಕ ಪಾತ್ರಧಾರಿಗಳ ಪ್ರವೇಶವಾಗುತ್ತದೆ. ಗಂಭೀರ ಪಾತ್ರಗಳನ್ನು ಪ್ರಬುದ್ಧವಾಗಿ ಕಟ್ಟಿಕೊಡುವುದರೊಂದಿಗೆ, ನವಿರಾದ ಹಾಸ್ಯಪಾತ್ರಕ್ಕೂ ನಾಟಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಸ್ಯವನ್ನು ಅಭಿವ್ಯಕ್ತಿಸುವ ಮೂಲಕ, ಶಿವನಾಗದೇವ ಮತ್ತು ಕಾಳಿಂಗರ ವ್ಯಕ್ತಿತ್ವದ ಭಿನ್ನ ಅಯಾಮಗಳಾಗಿ, ಕಮಲಳಿಗಾಗಿ ಕಾದಾಡುವ ಅವಳಿ-ಜವಳಿ ಎಂಬ ಎರಡು ಪಾತ್ರಗಳನ್ನು ನಾಟಕದಲ್ಲಿ ಚಿತ್ರಿಸಲಾಗಿದೆ. ಯಕ್ಷಗಾನದಲ್ಲಿ ಹಾಸ್ಯ, ಗಂಭೀರ ದುರಂತದ ಚಹರೆಯನ್ನು ನಿರ್ಲಿಪ್ತ ಕೆಲವನ್ನು ನಿರ್ವಹಿಸುತ್ತದೆ. ಅದೇ ರೀತಿಯ ಕೆಲಸವನ್ನು ಸಿರಿಸಂಪಿಗೆ ನಾಟಕದ ಅವಳಿ ಜವಳಿ ನಿರ್ವಹಿಸಿದರು, ಕೊನೆಗೆ ಅವರು ಸಹ ಹೆಣ್ಣಿಗಾಗಿ ದುರಂತದ ರಹದಾರಿಯನ್ನು ತುಳಿಯುತ್ತಾರೆ.
 
  ಪ್ರತಿಯೊಂದು ದೃಶ್ಯದ ಆರಂಭದಲ್ಲಿ ಭಾಗವತರ ಹಾಡುಗಾರಿಕೆಯನ್ನು ಕಾಣಬಹುದು. ಇಡೀ ದೃಶ್ಯದ ತಾತ್ವಿಕ ನಿಲುವನ್ನು ಈ ಹಾಡುಗಳು ಅಭಿವ್ಯಕ್ತಿಸುತ್ತದೆ. ಪ್ರತಿಯೊಂದು ಹಾಡಿನಲ್ಲಿ ಮಧ್ಯಮಾವತಿ, ಕೇಂದಾರ ಗೌಳ, ಮೋಹನ ಕಲ್ಯಾಣದಂತಹ ಹಲವಾರು ರಾಗಗಳನ್ನು, ಏಕತಾಳ, ಅಷ್ಟತಾಳ, ರೂಪಕಗಳಂತಹ ತಾಳಗಳನ್ನು ಗುರುತಿಸಬಹುದು. ಭಾಷೆಯ ದೃಷ್ಟಿಯಿಂದಲೂ ಸಿರಿಸಂಪಿಗೆ ಯಕ್ಷಗಾನ ಶೈಲಿಯ ಭಾಷೆಯನ್ನೆ ಬಳಸಿಕೊಂಡಿದೆ. ಆ ಮೂಲಕ ಪೌರಾಣಿಕ ಹಿನ್ನೆಲೆಯ ಸನ್ನಿವೇಶಗಳ ಸಂಭಾಷಣೆಯನ್ನು ಗುರುತಿಸಬಹುದು.
 
  ಇಡೀ ನಾಟಕ ಒಂದು ರೀತಿ ಕಲ್ಪತ ವಾಸ್ತವ (ಪ್ಯಾಂಟಸಿ) ದಂತೆ ಗೋಚರಿಸುವುದು ಸುಳ್ಳಲ್ಲ. ದೇಹ ಮತ್ತು ಮನಸ್ಸು ಸದಾ ಒಂದಾಗಿರಬೇಕು ಎಂಬ ನೈತಿಕತೆಯನ್ನು ಮಾನವ ಸಂಕುಲಕ್ಕೆ ರೂಪಕದ ಮೂಲಕ ಕಂಬಾರರು ಕಟ್ಟಿಕೊಟ್ಟಿದ್ದಾರೆ. ನಾಟಕದ ಕೊನೆಯಲ್ಲಿ ಶಿವನಾಗದೇವ ಸಿರಿಸಂಪಿಗೆಯಲ್ಲಿ ನಮ್ಮ ಮಗನನ್ನು ಸೀಳಿಕೊಳ್ಳದ ಹಾಗೇ ನೋಡಿಕೋ ಎಂದೇಳಿ ಪ್ರಾಣ ಬಿಡುತ್ತಾನೆ.
 
  ಒಟ್ಟಿನಲ್ಲಿ ಜನಪದ ರಂಗಭೂಮಿಯಾದ ಯಕ್ಷಗಾನದ ಪ್ರಯೋಗಗಳನ್ನು ಸಿರಿಸಂಪಿಗೆ ನಾಟಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿರುವುದನ್ನು ಕಾಣಬಹುದು.
 
 
ಮುಸ್ತಫ ಕೆ ಎಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ