ಸೋಮವಾರ, ಮಾರ್ಚ್ 23, 2015

ಮೆಕ್ಕಾ ದಾರಿಯಲ್ಲಿ ಒಡಮೂಡಿದ ಬೆಳಕಿನ ಜ್ಞಾನ - ನಾಟಕ ವಿಮರ್ಶೆ

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಅಯೋಜಿಸಿದ ಬಹುಭಾಷಾ ಲೇಖಕಿಯರ ಸಮಾವೇಶದಲ್ಲಿ ಮೆಕ್ಕಾ ದಾರಿ ಎಂಬ ಅನುವಾದಿತ ನಾಟಕ ರಂಗಪ್ರಯೋಗಗೊಂಡಿತು. ದಕ್ಷಿಣ ಅಫ್ರಿಕಾದ ಖ್ಯಾತ ನಾಟಕಕಾರ ಅಥೋಲ್ ಫುಗಾರ್ಡರ ದಿ ರೋಡ್ ಟು ಮೆಕ್ಕಾ ನಾಟಕವನ್ನು ಕನ್ನಡಕ್ಕೆ ಖ್ಯಾತ ರಂಗಕರ್ಮಿ ಪ್ರಸನ್ನರವರು ಅನುವಾದಿಸಿ ನಿರ್ದೇಶಿಸಿದ್ದಾರೆ. ಈ ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ತರಿಕಿಟ ಕಲಾ ಕಮ್ಮಟದ ಸಾರಥ್ಯದಲ್ಲಿ ನಿರೂಪಣೆಗೊಂಡತು.

ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿರುವ ಹಳ್ಳಿಗಾಡಿನ ಒಂಟಿ ಅನಾಥ ವಿಧವೆ ವೃದ್ಧೆ ಹೆಲನ್ ನಾಟಕದ ನಾಯಕಿ. ಆಕೆಯ ಏಕಾಂಗಿತನದ ಅಭಿವ್ಯಕ್ತಿಯ ನೆಲೆಯಾಗಿ ರೂಪುಗೊಂಡ ವಿಭಿನ್ನ ಅಯಾಮವೇ ಕಲೆ. ಕಲಾ ಸೃಷ್ಟಿಯ ಮೂಲಕ ಬೆಳಕಿನ ಹುಡುಕಾಟದಲ್ಲಿ ತೊಡಗುವ ಹೆಲನ್ ಸಿಮೆಂಟು, ಮರಳು, ಪಿಂಗಾಣಿಯನ್ನು ಬಳಸಿ ಗೂಬೆ, ಒಂಟೆ, ನವಿಲು ಮುಂತಾದ ಅನೇಕ ಜನಪದೀಯ ಕಲಾ ಸೃಷ್ಟಿಯನ್ನು ತನ್ನ ಮನೆಯಲ್ಲಿ ನಿರ್ಮಿಸುತ್ತಾಳೆ. ಬೆಳಕು ಕಲಾಕೃತಿಯ ಮೇಲೆ ಪ್ರತಿಫಲಿಸಿದಾಗ ಜ್ಞಾನವನ್ನು ಹುಡುಕುವ ಜ್ಞಾನವೃದ್ಧರಂತೆ ಪಶ್ಚಿಮದ ಮೆಕ್ಕಾ ನಗರದ ಕಡೆ ಹೊರಟಂತೆ ಕಲಾಕೃತಿಗಳು ಗೋಚರಿಸುತ್ತದೆ. ಅ ಕಲಾ ಕೃತಿಗಳ ರಚನೆಯ ಮೂಲಕ ಒಂಟಿತನದ ಬೇಗೆಯಿಂದ ಹೊರಬರಲು ಯತ್ನಿಸುವ ಹೆಲನ್, ಗ್ರಾಮದ ಸಂಪ್ರದಾಯಸ್ಥ ಕ್ರೈಸ್ತ ಮತಸ್ಥರ ಕಣ್ಣಲ್ಲಿ ಧರ್ಮಭ್ರಷ್ಟಳಾಗಿ ಗುರುತಿಸಿಕೊಳ್ಳುತ್ತಾಳೆ. ಅಕೆಯನ್ನು ಸಂಶಯದಿಂದ ಕಾಣುವ ಅಲ್ಲಿನ ಜನರು ಹೇಗಾದರು ಮಾಡಿ ಹೆಲನಳ ಅಸ್ತಿ ಕಬಳಿಸಿ, ವೃದ್ದಾಶ್ರಮಕ್ಕೆ ತಳ್ಳುವ ಉನ್ನಾರ ಮಾಡಿದರು.ಅದಕ್ಕಾಗಿ ಪಾದ್ರಿ ಮಾರಿಯಸ್ ಹೆಲನಳ ಮೇಲೆ ತುಂಬಾ ಕರುಣೆ ತೋರುವವನಂತೆ ನಟಿಸುತ್ತಾನೆ.ಸದ್ದಿಲ್ಲದೆ ಗ್ರಾಮದ ಜನ ಆಕೆಯ ಮನೆಗೆ ಬೆಂಕಿ ಹಚ್ಚುವುದು,ಕಲ್ಲು ಹೊಡೆಯುವುದನ್ನು ಮಾಡಿ ಬೇದರಿಸುತ್ತಾರೆ.ಅಕೆಗೆ ಹುಚ್ಚಿಯ ಪಟ್ಟ ಕಟ್ಟಿ ಯಾರು ಅಕೆಗೆ ಸಹಾಯ ಮಾಡದಂತೆ ಯೋಜನೆ ರೂಪಿಸಲಾಗುತ್ತದೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಈ ಎಲ್ಲಾ ವಂಚನೆಯನ್ನು  ಮುದುಕಿ ಹೆಲೆನಳ ಅಕ್ಷರಸ್ಥ ಗೆಳತಿ ಎಲ್ಸಿ ಬಯಲುಗೊಳಿಸುತ್ತಾಳೆ.ಇದರಿಂದ ಅತ್ಮ ಸ್ಥೈರ್ಯ ಪಡೆದ ಹೆಲನ್ ಪಾದರ್ ಮಾರಿಯಸ್ ನೀಡಿದ ವೃದ್ಧಾಶ್ರಮ ಪ್ರವೇಶ ಪತ್ರಕೆ ಸಹಿಹಾಕದೆ ನಿರಾಕರಿಸುತ್ತಾಳೆ. ಅ ಮೂಲಕ ಮಹಿಳಾ ಶೋಷಣೆಗೆ ಪ್ರತಿ ದ್ವನಿಯನ್ನು ಹೆಲನ್ ಅಭಿವ್ಯಕ್ತಿಸುವುದನ್ನು ಕಾಣಬಹುದು.
ದಲಿತ ಮತ್ತು ಮಹಿಳಾ ಪರ ಹೊರಾಟಗಾರ್ತಿ ದು.ಸರಸ್ವತಿಯವರು ಹೆಲನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.ಪಕ್ಕಾ ಗ್ರಾಮೀಣ ಅನಕ್ಷರಸ್ಥ ವೃದ್ಧ ಮಹಿಳೆಯಂತೆ ಕಂಗೊಳಿಸುವ ಅವರ ಅಭಿನಯ ಜೀವಪರವಾದ ಮುಗ್ಧತೆಯಿಂದ ಹಾಸುಹೊಕ್ಕಾಗಿದೆ. ದಕ್ಷಿಣ ಕನ್ನಡದ ಮೇರು ಪ್ರತಿಭೆ ವಾಣಿ ಪರಿಯೋಡಿಯವರು ಮುದುಕಿ ಹೆಲನಳ ಗೆಳತಿ ಎಲ್ಸಿಯ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಗ್ಲಾಮರಸ್ ಗೊಂಬೆಯಂತೆ ಕಂಗೊಳಿಸುವ ವಾಣಿಯವರ ಹಾವ-ಭಾವ ಯುವಕರ ಮನಸ್ಸನ್ನು ಸೇಳೆಯುದರಲ್ಲಿ ಸಂಶಯವಿಲ್ಲ. ಖಳನಾಯಕನಂತೆ ಎಂಟ್ರಿಕೊಡುವ ಪಾದ್ರಿ ಮಾರಿಯಸ್ ಪಾತ್ರವನ್ನು ಚಿತ್ರ ನಟ ಚಂದ್ರಹಾಸ್ ಉಳ್ಳಾಲ್ ರವರು ಮನೋಜ್ಞವಾಗಿ ಅಭಿನಯಿಸುವ ಮೂಲಕ ಇಡೀ ನಾಟಕವನ್ನು ವರ್ಣರಂಜಿತ ಕತ್ತಲು-ಬೆಳಕಿನ ನಡುವೆ ಮಂತ್ರ ಮುಗ್ದಗೊಳಿಸಿದ್ದಾರೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಹೆಲನ್ ಮತ್ತು ಎಲ್ಸಿ ಪಾತ್ರಗಳು ಇಡೀ ನಾಟಕದುದ್ದಕ್ಕೂ ಭಿನ್ನ ಅಯಾಮದಿಂದ ಗುರುತಿಸಲ್ಪಡುತ್ತದೆ. ಹೆಲನ್ ಅನಕ್ಷರಸ್ಥ  ಗ್ರಾಮೀಣ ಮಹಿಳೆ. ಎಲ್ಸಿ ನಗರ ಸಂಸ್ಕೃತಿಯ ಅಕ್ಷರಸ್ಥ ಮಹಿಳೆ.ಅದರೂ ಸಂಪ್ರದಾಯಸ್ಥ ಪುರುಷ ಸಮಾಜದಿಂದ ಹೆಲನ್ ಬಚಾವಾಗುತ್ತಾಳೆ.ಎಲ್ಸಿಯ ಕಥೆ ಅಗಲ್ಲ, ಅಷ್ಟೊಂದು ವಿದ್ಯಾಭ್ಯಾಸ ಪಡೆದು ಶಿಕ್ಷಿತಳಾಗಿದ್ದರು ವಿವಾಹಿತ ಪುರುಷನೊಂದಿಗೆ ಸಂಬಂಧಹೊಂದಿ ಗರ್ಭದರಿಸಿ,ಗರ್ಭಪಾತ ಮಾಡಿಸಿಕೊಳ್ಳುವ ಸನ್ನಿವೇಶವನ್ನು ಗಮನಿಸಬಹುದು. ಇದು ಒಂದು ರೀತಿ ತಿಳಿದು ತಿಳಿದು ಮಹಿಳಾ ಶೋಷಣೆಗೆ ತಮ್ಮನ್ನು ಒಡ್ಡಿಕೊಳ್ಳುವ ಸ್ಥಿತಿ ಎಂದರೆ ತಪ್ಪಾಗಲಾರದು.
ನಾಟಕದ ಇನ್ನೊಂದು ಅಯಾಮವು ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣ ಭೇದ ನೀತಿಯನ್ನು, ಅಂದಿನ ಕ್ರೈಸ್ತ ಮತ ಮತ್ತು ಚರ್ಚೆ ಬಿಳಿಯರ ಪರವಾಗಿತ್ತೆಂಬುದನ್ನು ಪ್ರತಿಪಾದಿಸುತ್ತದೆ.ಕಥಾ ಹಂದರದ ಬಗ್ಗೆ ಪ್ರೆಕ್ಷಕರಿಗೆ ಹಲವಾರು ಪ್ರಶ್ನೆಗಳು ಉದ್ಬವಿಸುವುದು ಸಹಜ. ತನ್ನ ಮನೆ ಬಿಟ್ಟು ಹೊರ ಜಗತ್ತಿನ ಬಗ್ಗೆ ತಿಳುವಳಿಕೆ ಇರದ ಹೆಲೆನ್ಗೆ ಮೆಕ್ಕಾದ ಜನರು ಜಾಣರು,ಜ್ಞಾನ ವೃದ್ದರಾಗಿ ಕಂಡದ್ದು ಹೇಗೆ?ಅಕೆ ಎಂದು ಮೆಕ್ಕಾ ಪ್ರಯಾಣ ಮಾಡಿರಲಿಲ್ಲ.ಅದರೂ ಅಕೆಯ ಕಲಾಕೃತಿಗಳು ಪಶ್ಚಿಮದ ಕಡೆ ಹೊರಟ ಮೆಕ್ಕಾ ದಾರಿಯಲ್ಲಿ ಪ್ರಯಾಣಿಸುವ ಒಂಟೆ, ನವಿಲು, ಜ್ಞಾನ ವೃದ್ಧರಂತೆ ಕಂಗೊಳಿಸಿದವು. ನಾಟಕದ ಕೊನೆಯಲ್ಲಿ ಪಾದ್ರಿ ಮಾರೆಸಸ್ ಸಹ ಮೆಕ್ಕಾವನ್ನು ನಕ್ಷೆಯಲ್ಲಿ ನೋಡಿ ಗುರುತಿಸುವುದಾಗಿ ನುಡಿಯುತ್ತಾನೆ.ಒಟ್ಟಿನಲ್ಲಿ ಕೆಲವಾರು ಅಸ್ಪಷ್ಟತೆಗಳು ನಾಟಕದ ಕಥಾ ಹಂದರದಲ್ಲಿ ಅಭಿವ್ಯಕ್ತವಾಗಿದೆ.
ಒಟ್ಟಿನಲ್ಲಿ ಈ ನಾಟಕದ ಕಥೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ನೈಜ ಘಟನೆ. ಅ ಕಾರಣದಿಂದ ಅಸ್ಪಷ್ಟತೆಗಳು ಹಾಸುಹೊಕ್ಕಾಗಿರಬಹುದು. ಕಥೆಯನ್ನು ನಾಟಕವಾಗಿ ನೋಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಅಥೋಲ್ ಫುಗಾರ್ಡರ್ ಕಟ್ಟಿಕೊಟ್ಟಿದ್ದಾರೆ. ಅ ಮೂಲಕ ಇಡೀ ನಾಟಕ ಸಾಮಾಜಿಕವಾಗಿ ಮಹಿಳೆಯ ಒಂಟಿತನ, ಅಭಿವ್ಯಕ್ತಿಯ ಮಾಧ್ಯಮ, ಧರ್ಮ ಎಂಬಿತ್ಯಾಧಿ ಅಂಶಗಳ ಸುತ್ತ ಸುತ್ತಿ,ಕೊನೆಗೆ ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡುತ್ತದೆ.

ಮುಸ್ತಫ ಕೆ ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ 
ಮಂಗಳಗಂಗೋತ್ರಿ 
ಮಂಗಳೂರು 


ಗುರುವಾರ, ಮಾರ್ಚ್ 19, 2015

ನಮ್ಮ ಕ್ರಿಯೇಟಿವಿಟಿ-ನಾವು ಕ್ರಿಯೇಟರ್ಸ್ ಒಮ್ಮೋಮ್ಮೆ ಟ್ರೆಂಡ್ ಸೆಟ್ಟರ್ಸ್


ಇಂದಿನ ಯುತ್ ಜನರೇಷನ್ ತುಂಬಾನೆ ಫಾಸ್ಟ್ ಅಂಡ್ ಸ್ಮಾರ್ಟ್.ಇತರರಿಗಿಂತ ತಾವು ಭಿನ್ನ ಎಂದು ಗುರುತಿಸಿಕೊಳ್ಳಲು ವಿಭಿನ್ನ ಸಾಹಸಕ್ಕೆ ಕೈ ಹಾಕುವ ಮೂಲಕ ಹೊಸ ಬಗೆಯ ಚಿಂತನೆಗಳಿಗೆ, ಪ್ರಯೋಗಶೀಲತೆಗೆ ಕ್ರಿಯೇಟರ್ಗಳಾಗಿ ಹೊರ ಹೊಮ್ಮವುದನ್ನು ಗುರುತಿಸಬಹುದು.ಸದಾ ತಾವು ಮಾಡುವ ಕೆಲಸದಲ್ಲಿ ಹೊಸತನ್ನು ತರಲು ತುಡಿಯುವ ಯುವ ಮನಸ್ಸುಗಳಿಗೆ ಕ್ಯಾಂಪಸ್ಗಳೆ ಕ್ರಿಯೇಟಿವ್ ಕ್ರಾಂತಿಯ ವೇದಿಕೆ.ಸ್ನೇಹಿತ ವಲಯದೊಂದಿಗೆ ಹರಟೆ,ಚರ್ಚೆಗಳಲ್ಲಿ ತೋಡಗಿಕೊಳ್ಳುವ ಮೂಲಕ ಸಮಾನ ಮನಸ್ಕ ವಿಚಾರಧಾರೆಗಳು ಒಡಮೂಡಿ, ಹೊಸ ಬಗೆಯ ಸವಾಲನ್ನು ಎದುರು ನೋಡುತ್ತಾ ಅದನೆದುರಿಸಲು ಸದಾ ಸಿದ್ದರಿರುತ್ತಾರೆ.ಅಭಿವ್ಯಕ್ತಗೊಂಡ ಹೊಸ ವಿಚಾರವನ್ನು ಎಕ್ಸಿಕ್ಯುಟ್ ಮಾಡಿ ಅದರಿಂದ ಸಫಲತೆಯನ್ನು ಗಳಿಸುತ್ತಾರೆ.
ಒಂದಾನೊಂದು ಕಾಲದಲ್ಲಿ ಸಾಕ್ಷ್ಯ ಚಿತ್ರ (ಡಾಕ್ಯುಮೆಂಟರಿ), ಕಿರುಚಿತ್ರಗಳನ್ನು ಪರಣಿತರು,ಅದಕ್ಕಾಗಿ ರೂಪಿತವಾದ ಫಿಕ್ಷನ್ ಸಂಸ್ಥೆಗಳು ರೂಪಿಸುತ್ತಿದ್ದವು. ಅದರೆ ಇಂದು ಕ್ಯಾಂಪಸ್ನ ಕ್ಯಾಂಟಿನ್ನಲ್ಲಿ ಬಿಸಿ-ಬಿಸಿ ಚಹಾ ಇರುತ್ತಾ ಪ್ರಸ್ತುತ ಸಿನಿಮಾಗಳ ಬಗ್ಗೆ ಕಮೆಂಟ್ಸ್ ಮಾಡುವಾಗ ಅನಿರೀಕ್ಷಿತವಾಗಿ ಸಾಕ್ಷ್ಯ ಚಿತ್ರವನ್ನು ತಾವೇ ತಯಾರಿಸುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಪಡ್ಡೆ ಹೈಕ್ಲು ತಮ್ಮ ಬಳಿ ಇರುವ ಕ್ಯಾಮರಾ, ಲ್ಯಾಪ್ಟಾಫ್ ಬಳಸಿ ತಾವೇ ಸ್ಕ್ರಿಪ್ಟ್ ಬರೆದು, ಎಡಿಟಿಂಗ್ ಮಾಡಿ ಹೆಚ್ಚಿನ ವೆಚ್ಚವಿಲ್ಲದೆ ಸಿಂಪಲ್ಲಾಗಿ, ಗಾಡವಾದ ವಿಚಾರವನ್ನು ತೆರೆಗೆ ತರುತ್ತಾರೆ. ಅ ಮೂಲಕ ಅವರು ತಾಂತ್ರಿಕವಾಗಿಯೂ, ಸಾಹಿತ್ಯಕವಾಗಿಯೂ ಪ್ರಭುದ್ದರಾಗಿ ಸಿನಿಮಾ ಕ್ಷೇತ್ರದ ಕಡೆ ಅಕರ್ಷಿತರಾಗುವುದನ್ನು ಕಾಣಬಹುದು.
ಇನ್ನೂ ಇಂಟರ್ನೇಟ್ ನಮ್ಮಂತಹ ಯುವಕರ ಅಚ್ಚುಮೆಚ್ಚಿನ ಕ್ಷೇತ್ರ. ಸಾಮಾನ್ಯವಾಗಿ ಇತ್ತೀಚೆಗೆ ಯುವಕರು ಹೆಚ್ಚಾಗಿ ವಾಟ್ಸ್ ಅಫ್, ಫೇಸ್ ಬುಕ್ನಲ್ಲಿ ಕಾಲಹರಣ ಮಾಡುತ್ತಾರೆಂಬ ಋಣಾತ್ಮಕ ಅಂಶಗಳು ಕೆಳಿಬರುತ್ತಿದೆಯೇ ಹೊರತು,ಯುವಕರು ಇದೆ ಅನ್ ಲೈನ್ ಜಗತ್ತನ್ನು ಬಳಸಿಕೊಂಡು ಫ್ರೀಲಾನ್ಸ್ ಪತ್ರಕರ್ತರಾಗಿಯು, ಕಂಟೆಂಟ್ ಮತ್ತು ಟೆಕ್ನಿಕಲ್ ರೈಟರ್ ಆಗಿಯು ಕಾರ್ಯನಿರ್ವಹಿಸುತ್ತಿರುವುದನ್ನು ಯಾರು ಗಮನಿಸಲಿಲ್ಲ.ವಿದ್ಯಾರ್ಥಿ ದೀಸೆಯಲ್ಲಿ ಬರವಣಿಗೆಯನ್ನು ಪ್ರಕರವಾಗಿ ಅಭಿವ್ಯಕ್ತಿಸಲು ಅನ್ ಲೈನ್ ತಾಣಗಳು ಸಹಕಾರಿಯಾಗಿದೆ. ಪ್ರತಿ ಲೇಖನಗಳಿಗೂ ಇಂತಿಷ್ಟು ಪ್ರೋತ್ಸಾಹ ಧನ ದೊರೆಯುದರಿಂದ ಬರಹದೊಂದಿಗೆ ಕ್ಯಾಂಪಸ್ನ ಚಿಲ್ಲರೆ ಖಚರ್ುಗಳಿಗೆ ಪಾಕೇಟ್ ಮನಿ ದೊರೆತಂತಾಗುತ್ತದೆ.ಪ್ರಸ್ತುತ ಕಾಲೇಜು ಮಟ್ಟದ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಯುವ ವಿದ್ಯಾರ್ಥಿಗಳು ವಿಭಾಗವಾರು ಬ್ಲಾಗ್ ರಚಿಸಿ ತಮ್ಮ ಲೇಖನ,ಕಥೆ,ವಿಮರ್ಶೆ,ಅಭಿಪ್ರಾಯ,ವರದಿಗಳನ್ನು ಬಿತ್ತರಿಸುವುದನ್ನು ಕಾಣಬಹುದು.
ಅಲ್ಲದೇ ಕ್ಯಾಂಪಸ್ಗಳ ಕಣ್ಗಾವಲಿನಂತೆ ಕಾರ್ಯನಿರ್ವಹಿಸುವ ಪ್ರಾಯೋಗಿಕ ವಿದ್ಯಾರ್ಥಿ ಭಿತ್ತಿ ಪತ್ರಿಕೆಗಳನ್ನು,ವಾರ್ಷಿ ಕಾಂಕಗಳನ್ನು ಸಮಾನ ಮನಸ್ಕ ಯುವಕರು ಅಸಕ್ತಿ ಮತ್ತು ಮುತುವರ್ಜಿಯಿಂದ ಪ್ರಾರಂಭಿಸಿ, ಹೆಚ್ಚಿನ ಯಶಸ್ಸನ್ನು ಗಳಿಸಿಕೊಂಡಿರುವುದನ್ನು ಕಾಣಬಹುದಾಗಿದೆ.ಅ ಮೂಲಕ ಅವರಲ್ಲಿ ಸಂಪಾದಕ, ಉಪಸಂಪಾದಕ, ವಿನ್ಯಾಸಕಾರ, ಹಾಗೂ ಉತ್ತಮ ಬರಹಗಾರರು  ಹುಟ್ಟಿಕೊಳ್ಳಲು ಸಾಧ್ಯ.
ಹುಚ್ಚು ಮನಸ್ಸಿನ ಹೊಳೆಯಲ್ಲಿ ಜಾಲಿ ಮೂಡಿನ ಯುವ ಸಮೂಹ ತಮ್ಮ ಸಾಹಸ ಮತ್ತು ಫ್ರೌಡಿಮೆಯನ್ನು ಪ್ರದರ್ಶಿ ಸುವ ಸಲುವಾಗಿ ಹಳೆ ಮಾದರಿಯ ಬುಲೆಟ್ ಬೈಕ್ಗಳನ್ನು ರಂಗು ರಂಗು ಬಣ್ಣಗಳಿಂದ ಕಂಗೋಳಿಸುವಂತೆ ಮಾಡಿ ಸಾವಿರಾರು ಮೈಲು ದೂರಗಳವರೆಗೆ ಕ್ರಮಿಸಿ ಸಾಹಸ ಮೆರೆಯುತ್ತಾರೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೇಸ್ಗಳಲ್ಲಿ ಭಾಗವಹಿಸುವ ಯುತ್ಸ್ಗಳನ್ನು ಕಾಣಬಹುದು.ತಮ್ಮ ಸಂಗಡಿಗರೊಂದಿಗೆ ಬೆಟ್ಟ ಗುಡ್ಡ,ಕಾಡು ಮೇಡುಗಳಿಗೆ ತೆರಳಿ ಟ್ರಕಿಂಗ್ ಎಂಬ ಸಾಧನೆಯ ಹಾದಿಯನ್ನು ತುಳಿಯುತ್ತಾರೆ.ಇದಕ್ಕೆಲ್ಲ ಸ್ನೇಹಿತರೆಂಬ ಒಕ್ಕೂಟ ವ್ಯವಸ್ಥೆಯೆ ಕಾರಣ. ದೇಶ ಸುತ್ತು ಕೋಶ ಓದು ಎಂಬ ತತ್ವ ಚಿಂತನೆಗಳನ್ನು ಆಧುನಿಕ ಯುವ ಸಮೂಹ ಚಾಚು ತಪ್ಪದೆ ಪಾಲಿಸುವ ಮೂಲಕ, ನೈತಿಕವಾಗಿ ಯುವ ಸಮೂಹ ಪ್ರಬುಧ್ಧಗೊಳ್ಳುವುದನ್ನು ಕಾಣಬಹುದು.
ದಿನದಿಂದ ದಿನಕ್ಕೆ ಬಣ್ಣಗಳ ಕಡೆಗೆ ಯುವಕರು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ. ಸ್ಪ್ರೇ ಪೆಂಟ್ಗಳನ್ನು ಬಳಸಿಕೊಂಡು ರಸ್ತೆಯ ಮೇಲೆ, ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಒಡಮೂಡಿಸುವ ಯುವಕರ ಈ ಅಸಕ್ತಿಗೆ ಸ್ಟ್ರೀಟ್ಪೆಂಟ್ ಎಂದು ಹೆಸರು. ವಿದೇಶದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಈ ಕಲೆಯನ್ನು ಭಾರತದ ವಿದ್ಯಾರ್ಥಿಗಳು ಕಲಿತು ಹಲವಾರು ಕ್ಯಾಂಪಸ್ಗಳ ಸೌಂದರ್ಯ ಹೆಚ್ಚಿಸಿದ್ದಾರೆ.
ಸಾಹಿತ್ಯ ಮಾತ್ರವಲ್ಲದೆ ಸಂಗೀತದ ಹಳೆಯ ಪರಿಕಲ್ಪನೆಗೆ ಹೊಸ ಬಗೆಯ ಕಾಯಕಲ್ಪವನ್ನು ನೀಡಿರುವ ಕ್ಯಾಂಪಸ್ ಸಿಂಗರ್ಸ್ಗಳು ತಮ್ಮದೆ ಅದ ಬ್ಯಾಂಡ್ಗಳನ್ನು ಕಟ್ಟಿಕೊಂಡು,ತಾವೇ ಬರೆದ ಸಾಹಿತ್ಯಕ್ಕೆ ತಾವೇ ಸಂಗೀತ ನೀಡಿ,ತಮ್ಮ ದ್ವನಿಯಲ್ಲಿಯೇ ಹಾಡಿ ಪಾಪ್ಯೂಲರ್ ಅದ ಎಷ್ಟೊ ಘಟನೆಗಳು ನಮ್ಮ ಸುತ್ತಲಿದೆ.ಬ್ಯಾಂಡ್ಗಳು ನೀಡುವ ಕಾರ್ಯಕ್ರಮದಿಂದ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ವಿವಿಧ ಉದ್ದೇಶಗಳಿಗಾಗಿ ಬಳಸುವುದನ್ನು ಕಾಣಬಹುದು.ಇಷ್ಟು ಮಾತ್ರವಲ್ಲದೆ ಕ್ಯಾಂಪಸ್ಗಳಲ್ಲಿ ರಾಜಕೀಯ ಚಿಂತನೆಗಳ ಕಡೆಗೂ ವಿದ್ಯಾರ್ಥಿಗಳು ಒಲವನ್ನು ತೋರಿಸುತ್ತಿದ್ದಾರೆ. ಅ ಮೂಲಕ ಮತದಾನದಂತಹ ಪ್ರಕಿಯೇಗಳಲ್ಲಿ, ಮತದಾನಕ್ಕಾಗಿ ಇತರರನ್ನು ಪ್ರೋತ್ಸಾಹಿಸುವ ಜನಜಾಗೃತಿಯ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕೆಲವೊಮ್ಮೆ ಕ್ಯಾಂಪಸ್ಗಳಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಪ್ರತಿಭಟನೆಗಳು ಸಂಭವಿಸಿದಾಗ ಕ್ರಿಯೇಟಿವ್ ಸ್ಲೋಗನ್ಸ್, ಮತ್ತು ವಿಭಿನ್ನ ವೇಶಭೂಷಣಗಳ ಮೂಲಕ ಪ್ರತಿಭಟಿಸುವ ಕಲಾತ್ಮಕವಾದ ಮುಷ್ಕರಗಳನ್ನು,ರಸ್ತೆ ಸಪ್ತಾಹಗಳನ್ನು ಆಧುನಿಕ ಯುವ ಸಮೂಹ ರೂಪಿಸುವುದನ್ನು ಗಮನಿಸಬಹುದು.
ಒಟ್ಟಿನಲ್ಲಿ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ನಾಟಕ, ಕಲೆ, ಪ್ರವಾಸ, ಬರಹ, ಚಿತ್ರಕಲೆ, ಇತ್ಯಾದಿ ಅಂಶಗಳನ್ನು ತಮ್ಮ ಕ್ರಿಯೇಟಿವ್ ಚಿಂತನೆಗಳ ಮುಖವಾಣಿಯಾಗಿಸಿ ತಮ್ಮ ಪ್ರತಿಭೆಗಳನ್ನು ಅಭಿವ್ಯಕ್ತಿಸುವ ಕ್ಯಾಂಪಸ್ ಚಿಂತಕರ ಟ್ಯಾಲೆಂಟ್ಸ್ಗಳನ್ನು ಇಲ್ಲಿ ಸ್ಮರಿಸಿಕೊಳ್ಳಲೆ ಬೇಕು. ಇದು ವಿದ್ಯಾರ್ಥಿಗಳ ಭೌದ್ಧಿಕ ಸ್ವಾವಲಂಬನೆಯ ಪ್ರತೀಕವೆಂದರೆ ತಪ್ಪಾಗಲಾರದು.

ಮುಸ್ತಫ .ಕೆ ಹೆಚ್,
ಪ್ರಥಮ ಎಂ ಎ ಕನ್ನಡ ವಿಭಾಗ,
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ,
ಮಂಗಳಗಂಗೋತ್ರಿ,
ಮಂಗಳೂರು 

ಬುಧವಾರ, ಮಾರ್ಚ್ 4, 2015

ಅಂತರ್ಜಾಲ ಮತ್ತು ಕನ್ನಡ ಸಾಹಿತ್ಯ

"ಬದುವಿಲ್ಲದ ಹೊಲಗಳು" 

ಹಿಂದೆಲ್ಲಾ ಸಾಹಿತ್ಯಕ ಬರಹಗಳು ಪುಸ್ತಕ ರೂಪದಲ್ಲಿಯೊ, ಪತ್ರಿಕೆ ನಿಯತಕಾಲಿಕೆಗಳಲ್ಲಿ ಲೇಖನ, ಕಥೆ, ಕವನ, ವಿಮರ್ಶೆ, ಅಂಕಣಗಳ ರೂಪದಲ್ಲಿಯೊ ಅಭಿವ್ಯಕ್ತಗೊಂಡು ಸಹೃದಯನ ಜ್ಞಾನ ಶಾಖೆಯನ್ನು ಸೇರುತ್ತಿತ್ತು . ಇದನ್ನೊರತುಪಡಿಸಿ ಸೃಜನಶೀಲ ಸಾಹಿತ್ಯಕ ಬರಹಗಳು ಪ್ರಕಟವಾಗಲು ಯಾವುದೇ ಮಾಧ್ಯಮಗಳಿರಲಿಲ್ಲ. ಅನಂತರ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ರೇಡಿಯೊ ,ದೂರದರ್ಶನಗಳು ವ್ಯಾಪಿಸಿಕೊಂಡು ಅ ಮೂಲಕ ಕನ್ನಡ ತನವನ್ನು ಒಡಮೂಡಿಸಿತು.  ಕನ್ನಡ ಸಾಹಿತ್ಯ 21ನೇಯ ಶತಮಾನದ ಕೊನೆಯ ಭಾಗದಲ್ಲಿ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ಸ್ವಲ್ಪ ಬದಲಾವಣೆಯ ಹಾದಿ ತುಳಿದಿರುವುದನ್ನು ಗಮನಿಸಬಹುದು.ಕಂಪ್ಯೂಟರ್ ಮತ್ತು ಇಂಟರ್ನೇಟ್ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ಹೊಂದುತ್ತಿರುವುದನ್ನು ಗುರುತಿಸಬಹುದು. ಕನ್ನಡ ಸಾಹಿತ್ಯ ವಿವಿಧ ಅಯಾಮಗಳಲ್ಲಿ  ಅಂತರ್ಜಾಲವನ್ನು ವ್ಯಾಪಿಸಿಕೊಂಡಿದೆ. ಅ ಮೂಲಕ ಸಾಕ್ಷಾತ್ಕಾರಗೊಳ್ಳುತ್ತಿರುವ ಕನ್ನಡ ಭಾಷೆಯ ಸಾಂಸ್ಕೃತಿಕ ಚೌಕಟ್ಟು ವಿಸ್ತೃತವಾಗಿದೆ.
ಕನ್ನಡ ಮನಸ್ಸು ಮತ್ತು ಬ್ಲಾಗ್ಗಳು
ಗಡಿ ರೇಖೆ ಇಲ್ಲದ ಅನ್ಲೈನ್ ಜಗತ್ತು ಕನ್ನಡ ತನವನ್ನು ಸಾಹಿತಿಕ ನೆಲೆಗಟ್ಟಿನಲ್ಲಿ ಅಭಿವ್ಯಕ್ತಿಸುವ ಮೂಲಕ 'ವಿಶ್ವ ಗ್ರಾಮಕ್ಕೆ ಪರಿಚಯಿಸಿತು. ಅ ಮೂಲಕ ಭಾಷೆ ,ಸಾಹಿತ್ಯ ಪ್ರಭುದ್ಧಗೊಳ್ಳಲು ಸಹಕಾರಿಯಾಯಿತು. ಬ್ಲಾಗ್ಗಳು ಹೊಸ ಸಂವೇಧನೆಯ ಖಾಸಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹುಟ್ಟಿಕೊಂಡ ತಾಣವಾಗಿದೆ.ಇಲ್ಲಿ ವ್ಯಕ್ತಿಯು ತನ್ನ ವೈಯಕ್ತಿಕ ವಿಚಾರಧಾರೆಗಳನ್ನು ನಿರೂಪಿಸಬಹುದಾಗಿದೆ. ಕನ್ನಡ ಸಾಹಿತ್ಯದ ಹೊಸ ಒಲವನ್ನು ಪಸರಿಸಲು ಬ್ಲಾಗ್ಗಳು ಹೆಚ್ಚು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಸೃಜನಶೀಲ ಬರಹಗಾರರು , ಭಾಷೆಯನ್ನು ಬೆಳೆಸಲು ಪಣತೊಟ್ಟವರು ಫಲಾಪೇಕ್ಷೆ ಇಲ್ಲದೆ ಬ್ಲಾಗ್ ಲೋಕಕ್ಕೆ ಬರೆಯುದನ್ನು ಕಾಣಬಹುದು .ಇದು ಕನ್ನಡ ಸೇವೆಯೇ ಸರಿ. ದಿನಪತ್ರಿಕೆಗಳಲ್ಲಿರುವಂತೆ ಇಂತಿಷ್ಟೆ ಪದಗಳನ್ನು ಬರೆಯಬೇಕೆಂಬ ಕಾಲಂ ಸಂಸ್ಕೃತಿಯ ಭಯ ಬ್ಲಾಗ್ ಬರಹಗಾರರಿಗಿಲ್ಲ.ಇದರಿಂದಾಗಿ ಬರಹಗಳು ವಿಸ್ತಾರವಾಗಿ ಒಡಮೂಡುವುದನ್ನು ಕಾಣಬಹುದು.
ಹಿಂದೆಲ್ಲಾ ಸಾಹಿತಿಗಳೆಂಬ ಹಣೆ ಪಟ್ಟಿ ಕಟ್ಟಿಕೊಂಡವರು ಮಾತ್ರ ಬರವಣಿಗೆಯಲ್ಲಿ ತೊಡಗುತ್ತಿದ್ದರು , ಜನಸಾಮಾನ್ಯ, ಸಹೃದಯ ಬರಿ ಅವರ ವಿಚಾರಧಾರೆಗಳನ್ನು ಓದಿ ಸುಮ್ಮನಾಗುವ ಪ್ರವೃತ್ತಿ ಇತ್ತು. ಅದರೆ ಇಂದು ಜನಸಾಮಾನ್ಯನು ಕೂಡ ಸಾಹಿತಿ ಎಂಬ ಟ್ಯಾಗ್ ಲೈನ್ ಇಲ್ಲದೆ ತಮ್ಮಲ್ಲಿರುವ ಜ್ಞಾನವನ್ನು ಬರಹಕ್ಕಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಇದಕ್ಕೆ ಬ್ಲಾಗ್ ಎಂಬ ಮಾಯಾ ಜಿಂಕೆ ಕಾರಣ.ಎಲ್ಲರಿಗೂ ಸಾಹಿತ್ಯಕ ಬರಹ ಸಿದ್ಧಿಯಲ್ಲ. ತಮ್ಮ ತಮ್ಮ ಪರಿಣಿತ ಕ್ಷೇತ್ರ ವ್ಯಾಪ್ತಿಗನುಗುಣವಾಗಿ ಬರೆಯಲು ಪ್ರಯತ್ನಿಸುವ ಹಲವು ಮಂದಿ ನಮ್ಮ ಜೊತೆಗಿದ್ದಾರೆ ಅವರೆಲ್ಲಾ ಬ್ಲಾಗ್ ಬರಹದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಕನ್ನಡ ಬ್ಲಾಗ್ಗಳ ವಿಂಗಡನೆ

ಕನ್ನಡ ಬ್ಲಾಗ್ಗಳನ್ನು ಸಾಹಿತ್ಯಕ, ಸಾಮಾಜಿಕ , ಸಾಂಸ್ಕೃತಿಕ, ವೈಯಕ್ತಿಕ, ಶೈಕ್ಷಣಿಕ ಹಾಗೂ  ಇತರ ವಿಷಯಗಳ ಬ್ಲಾಗ್ಗಳೆಂದು ಅಧ್ಯಯನದ ದೃಷ್ಟಿಯಿಂದ ವಿಭಾಗಿಸಬಹುದು.
ಸಾಹಿತ್ಯಕ ಬ್ಲಾಗ್ನಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಧಾರೆಗಳನ್ನು ಪ್ರಕಟಿಸುವ ,ಚಚರ್ಿಸುವ , ಅಭಿಪ್ರಾಯಗಳನ್ನು ರೂಪಿಸುವ ಅವಕಾಶಗಳಿರುತ್ತವೆ .ಉಳಿದಂತೆ ಸಾಮಾಜಿಕ ಸಾಂಸ್ಕೃತಿಕ ,ವೈಯಕ್ತಿಕ ,ಶೈಕ್ಷಣಿಕ ಬ್ಲಾಗ್ಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಬರಹಗಳನ್ನು ರೂಪಿಸುತ್ತವೆ.ಹಾಗಂತ ಹೇಳಿ ಈ ಎಲ್ಲಾ ಬ್ಲಾಗ್ಗಳು ಸಾಹಿತ್ಯಕ ಅಂಶಗಳಿರುವ ಬರಹಗಳನ್ನು ರೂಪಿಸುತ್ತಿಲ್ಲಾ ಎಂದಲ್ಲ.
ಕನ್ನಡ ಸಾಹಿತ್ಯಿಕ ಬ್ಲಾಗ್ನಲ್ಲಿ ಅಥವಾ ತಾಣಗಳ ಪ್ರಮುಖ ವಿಭಾಗಗಳು
ಕನ್ನಡ ಸಂಘ ಸಂಸ್ಥೆಗಳಿಂದ ರೂಪಿಸಲ್ಪಟ್ಟ ಸಾಹಿತ್ಯಿಕ ಬ್ಲಾಗ್ಗಳು  
ಸಮಾನ ಮನಸ್ಕ ಬರಹಗಾರರಿಂದ ರಚಿಸಲ್ಪಟ್ಟ ತಾಣಗಳು
ವೈಯಕ್ತಿಕ ಬ್ಲಾಗ್ಗಳು
ಕಂಪೆನಿ ಮಾದರಿಯ,ಇಂಟರ್ ನೆಟ್ ಸಾಹಿತ್ಯ ಪತ್ರಿಕೆಗಳು,ಲಾಭದಾಯಕ ಉದ್ದೇಶದಿಂದ ರೂಪಿತವಾದ ಕನ್ನಡ ಸಾಹಿತ್ಯಕ ಬ್ಲಾಗ್ಗಳು
ಕನ್ನಡ ಪುಸ್ತಕ, ಸಾಫ್ಟ್ವೇರ್ ತಂತ್ರಜ್ಞಾನಗಳ ಪರಿಚಯಕ್ಕಾಗಿ ರೂಪುಗೊಂಡ ತಾಣಗಳು

1.ಕನ್ನಡ ಸಂಘ ಸಂಸ್ಥೆಗಳಿಂದ ರೂಪಿಸಲ್ಪಟ್ಟ ಸಾಹಿತ್ಯಿಕ ಬ್ಲಾಗ್ಗಳು  

ಇಂತಹ ಬ್ಲಾಗ್ಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದಲು,ಭಾಷಿಕ ಹೋರಾಟದ ಮನೋಧರ್ಮದಿಂದಲು ಅಭಿವ್ಯಕ್ತಗೊಂಡಂತಹ ಬ್ಲಾಗ್ಗಳಾಗಿವೆ.ಇಲ್ಲಿ ಸಂಘಟನೆಯ ಧ್ಯೇಯೋದ್ಧೇಶ, ಕಾರ್ಯಚಟುವಟಿಕೆಗಳನ್ನು  ಸಾರ್ವಜನಿಕರಲ್ಲಿ ಬಿತ್ತರಿಸುವ ಮೂಲಕ ತಮ್ಮ ಪಾಪ್ಯುಲಾರಿಟಿಯನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ಓದುಗನನ್ನು ಭಾಷಿಕ ನೆಲೆಯಿಂದ ಪ್ರೇರೆಪಿಸುವ ಕೆಲಸವು ನಡೆಯುವುದನ್ನು ಗಮನಿಸಬಹುದಾಗಿದೆ.
ಉದಾಹರಣೆಗೆ-ಕರ್ನಾಟಕ ರಕ್ಷಣಾ ವೇದಿಕೆಯು ಕರವೇ ನಲ್ನುಡಿ ಮಾಸಿಕ ಪತ್ರಿಕೆಗಾಗಿ ಕರವೇ ಬ್ಲಾಗ್ನನ್ನು ರಚಿಸಿಕೊಂಡಿದೆ. ಅ ಮೂಲಕ ಸಂಘಟನೆಯೊಂದು ತನ್ನ ವ್ಯಾಪ್ತಿಯಲ್ಲಿ ಕಾರ್ಯಪ್ರವೃತಿಸುವ ಕರವೇ ಮಾಸಿಕವನ್ನು ಅನ್ ಲೈನ್ ಓದುಗರಿಗೆ ಹತ್ತಿರವಾಗಿಸಿದೆ.

2. ಸಮಾನ ಮನಸ್ಕ ಬರಹಗಾರರಿಂದ ರಚಿಸಲ್ಪಟ್ಟ ತಾಣಗಳು

ಸಮಾನ ಮನಸ್ಕ ಬರಹಗಾರರು ಒಟ್ಟು ಸೇರಿ ತಮ್ಮಲ್ಲಿರುವ ಕನ್ನಡ ತನವನ್ನು ಹೊರಚೆಲ್ಲುವ ಉದ್ದೇಶದಿಂದ ,ತಮ್ಮ ಬರವಣಿಗೆಯನ್ನು ಸುಧಾರಿಸುವ ದೃಷ್ಟಿಯಿಂದ ಇಂತಹ ಬ್ಲಾಗ್ಗಳನ್ನು ರಚಿಸಿ ಬರವಣಿಗೆ ಮಾಡುವುದನ್ನು ಕಾಣಬಹುದಾಗಿದೆ. ಪತ್ರಿಕೆಗಳಲ್ಲಿನ ಸಂಪಾದಕೀಯ ಶಿಸ್ತನು ಇಂತಹ ಬ್ಲಾಗ್ನಲ್ಲಿ ಕಾಣಬಹುದು. 
ಉದಾಹರಣೆ-ಕನ್ನಡ ಕನ್ನಡಿಗ ಕನರ್ಾಟಕ ಎಂಬ ಬ್ಲಾಗ್ ಸುಮಾರು ಐದು ಮಂದಿ ಸ್ನೇಹಿತ ಬಳಗದಿಂದ ಪ್ರಾರಂಭಗೊಂಡ ಬ್ಲಾಗ್.ಈ ತಾಣಕ್ಕೆ ಸಾರ್ವಜನಿಕರು ತಮ್ಮ ಲೇಖನಗಳನ್ನು ಕಳುಹಿಸಿಕೊಡುವ ಅವಕಾಶವಿದೆ.

3. ವೈಯಕ್ತಿಕ ಬ್ಲಾಗ್ಗಳು

ವ್ಯಕ್ತಿ ವೈಯಕ್ತಿಕವಾಗಿ ಭಾವಾಭಿವ್ಯಕ್ತಿಯನ್ನು ರೂಪಿಸಲು ಸ್ಥಾಪಿಸಿಕೊಂಡ ಬ್ಲಾಗ್ಗಳನ್ನು ವೈಯಕ್ತಿಕ ಕನ್ನಡ ಸಾಹಿತ್ಯಿಕ ಬ್ಲಾಗ್ ಎಂದು ಕರೆಯಬಹುದಾಗಿದೆ.

4. ಕಂಪೆನಿ ಮಾದರಿಯ,ಇಂಟರ್ನೆಟ್ ಸಾಹಿತ್ಯ ಪತ್ರಿಕೆಗಳು ,ಲಾಭದಾಯಕ ಉದ್ದೇಶದಿಂದ ರೂಪಿತವಾದ ಕನ್ನಡ ಸಾಹಿತ್ಯಕ ಬ್ಲಾಗ್ಗಳು

ಲಾಭದಾಯಕ ಉದ್ದೇಶದಿಂದ ಜಾಹಿರಾತುಗಳನ್ನು ಅವಲಂಭಿಸಿ ಸುದ್ದಿಗಳೊಂದಿಗೆ , ಸಾಹಿತ್ಯಿಕ ಬರಹಗಳನ್ನು ಪ್ರಕಟಿಸುವ ಹಲವಾರು ಬ್ಲಾಗ್ಗಳು ಮತ್ತು ಅನ್ ಲೈನ್ ಕನ್ನಡ ಸಾಹಿತ್ಯ ಪತ್ರಿಕೆಗಳನ್ನು ಗುರುತಿಸಬಹುದು. ಇಲ್ಲಿ ಸಾಮಾನ್ಯ ದಿಪತ್ರಿಕೆಗಳಿರುವ ಸಂಪಾದಕ ಮಂಡಳಿ ,ವರದಿಗಾರ ,ಸಣ್ಣ ಕಛೇರಿಗಳಿರುವುದನ್ನು ಕಾಣಬಹುದು.ಜಾಹಿರಾತುಗಳನ್ನು ತಮ್ಮ ವೇಬ್ ಪುಟಗಳಲ್ಲಿ ಪ್ರದರ್ಶಿಸುವ ಮೂಲಕ ಹಣಗಳಿಸುವುದು ಈ ತಾಣಗಳ ಮುಖ್ಯ ಉದ್ಧೇಶ .ಅದರೊಂದಿಗೆ ಕನ್ನಡ ಸೇವೆಯನ್ನು ಮಾಡುವ ಹಲವು ಮನಸ್ಸುಗಳಿದೆ ಎಂಬುದು ಸುಳ್ಳಲ್ಲ.
ಉದಾಹರಣೆಗೆ-ಕನ್ನಡ ನೇಟ್ ,ಏನ್ ಗುರು ಕಾಫಿ ಅಯ್ತಾ

5.ಕನ್ನಡ ಪುಸ್ತಕ, ಸಾಫ್ಟ್ವೇರ್ ತಂತ್ರಜ್ಞಾನಗಳ ಪರಿಚಯಕ್ಕಾಗಿ ರೂಪುಗೊಂಡ ಮಾಹಿತಿ ತಾಣಗಳು

ಕನ್ನಡದಲ್ಲಿ ಹೊಸದಾಗಿ ಬಿಡುಗಡೆಯಾದ  ಪುಸ್ತಕಗಳ ಪರಿಚಯ ,ಪುಸ್ತಕಗಳ ವಿಮರ್ಶೆ ಇತ್ಯಾಧಿ ಪ್ರತಿಪಾದಿಸಲು ತಮ್ಮ ಬ್ಲಾಗ್,ತಾಣಗಳನ್ನು ಬಳಸಿಕೊಂಡಿದ್ದಾರೆ.ಇಲ್ಲಿ ಪೂರ್ಣ ಪ್ರಮಾಣದ ಪುಸ್ತಕ ರೂಪಗಳು ದೊರೆಯುದಿಲ್ಲ ,ಬದಲಾಗಿ ಮಾಹಿತಿ,ಪುಸ್ತಕದ ಮುನ್ನುಡಿ,ಹಿನ್ನುಡಿಗಳನ್ನು ಕಾಣಬಹುದು.
ಉದಾಹರಣೆಗೆ- ಅಶೋಕ್ ವರ್ಧನ್ರವರ ಅತ್ರಿ ಬುಕ್ ಸೆಂಟರ್ ಬ್ಲಾಗ್, ಚುಕು ಬುಕು ಎಂಬ ಪುಸ್ತಕ ಮಾಹಿತಿ ತಾಣ,ಚಿಂತನ ಪುಸ್ತಕ,ಪುಸ್ತಕ ಜಗತ್ತುಗಳೆಂಬ ಬ್ಲಾಗ್ಗಳನ್ನು ವಿಕ್ಷೀಸಬಹುದು.ಇನ್ನೂ ಟೋಟೆಲ್ ಕನ್ನಡ ಸ್ವಪ್ನ, ನವಕನರ್ಾಟಕ ದಂತಹ ಮಾರಾಟ ತಾಣಗಳನ್ನು ಗುರುತಿಸಬಹುದು.

ಕನ್ನಡದ ಪ್ರಮುಖ ಅಂತರ್ಜಾಲ ಜ್ಞಾನ ಶಾಖೆಗಳು

ಕನ್ನಡ ಭಾಷೆ  ಅಂತಜರ್ಾಲದಲ್ಲಿ ತನ್ನದೆ ಅದ ಜ್ಞಾನ ಶಾಖೆಯ ತಾಣಗಳನ್ನು ರೂಪಿಸಿಕೊಂಡಿದೆ. ಅ ಮೂಲಕ ಕನ್ನಡಕ್ಕೆ ಸಂಬಂಧಿಸಿದ ಸಾಹಿತಿಕ ಒಲವನ್ನು ಪ್ರಚುರಪಡಿಸಲು  ಸಾಂಸ್ಕೃತಿಕ ವೇದಿಕೆಯನ್ನು ನಿರ್ಮಿಸಿಕೊಂಡಿದೆ 

1. ಕಣಜ

ಕರ್ನಾಟಕ ಸರಕಾರ ಕಣಜ ಎಂಬ ಜ್ಞಾನ ಶಾಖೆಯನ್ನು  ಸ್ಥಾಪಿಸುವ ಮೂಲಕ ಸಾಹಿತ್ಯಕ ಓದಿಗೆ ಹೊಸದೊಂದು ಕಾಯಕಲ್ಪ ಸೃಷ್ಟಿಸಿಕೊಟ್ಟಿತು. ಕನ್ನಡಕ್ಕೆ 8  ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ  ಕುವೆಂಪು ,ಬೇಂದ್ರೆ , ಶಿವರಾಮ ಕಾರಂತ .ಮಾಸ್ತಿ ವೆಂಕಟೇಶ ಅಯ್ಯಂಗಾರ್ .ವಿಕೃ ಗೋಕಾಕ್, ಯು .ಆರ್ . ಅನಂತಮೂರ್ತಿ, ಗೀರಿಶ್ ಕರ್ನಾಡ್ ಹಾಗೂ ಚಂದ್ರಶೇಖರ ಕಂಬಾರರ ಸಮಗ್ರ ಕೃತಿಗಳ ಸಂಗ್ರಹಗಳನ್ನು ಅಂತರ್ಜಾಲ  ಕನ್ನಡದ ಜ್ಞಾನಕೋಶವಾದ ಕಣಜ ಡಾಟ್ ಇನ್  ಸಂಗ್ರಹಿಸಿ ಸಾರ್ವಜನಿಕ ಬಳಕೆಗೆ ಮೀಸಲಿರಿಸಲಾಗಿದೆ . ಇದಲ್ಲದೇ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಇಲ್ಲಿ ಓದಬಹುದು. ಕನ್ನಡ ಅಕ್ಷರಗಳನ್ನು ನಾವು ಓದದೆ ಸಾಫ್ಟ್ವೇರ್ಗಳೆ ಓದಿ ಹೇಳುವ ತಾಂತ್ರಿಕ ಪ್ರವೃತ್ತಿಗಳ ಬೆಳವಣಿಗೆಯು ಇತ್ತಿಚ್ಚಿನ ದಿನಗಳಲ್ಲಿ  ಪ್ರಾರಂಭವಾಗಿದೆ. ಕಣಜ .ಕಾಂ ನಲ್ಲಿ  "ಈ - ಸ್ಪೀಕ್ "ಎಂಬ ಮುಕ್ತ ಸಾಪ್ಟ್ವೇರ್ ಅನ್ನು ಓದುಗರ ಅನುಕೂಲಕ್ಕಾಗಿ ಉಚಿತವಾಗಿ ನೀಡಲಾಗುತ್ತಿದೆ. ಇಂತಹ ಅನೇಕ ಸಾಫ್ಟ್ವೇರ್ಗಳ ಮೂಲಕ ಪುಸ್ತಕ ಓದಿಸಿ, ಮೂಕ ಶೋತೃಗಳಾಗಬಹುದು .

2.ವಚನ ಸಂಚಯ

ಈ ಅಂತರ್ಜಾಲ ತಾಣದಲ್ಲಿ 258  ವಚನಕಾರರ 20930 ವಚನಗಳಿವೆ.ಇಲ್ಲಿರುವ ತಂತ್ರಾಂಶ ಬಳಸಿಕೊಂಡು ವಚನಗಳಲ್ಲಿನ ನಿದರ್ಿಷ್ಟ ಪದಕ್ಕೆ ಅರ್ಥವನ್ನು ಹುಡುಕಬಹುದು .ಅ ಮೂಲಕ ಬೃಹತ್ ವಚನ ಸಂಪುಟವನ್ನು ಅನ್ ಲೈನ್ ಮೂಲಕ ಓದುವ ಅವಕಾಶ ನಮ್ಮದಾಗುತ್ತದೆ.

3.ಕೇಳಿ ಕಥೆಯ ಜಾಲತಾಣ 

ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕರ ಗುಂಪೊಂದು ಅಂತಜರ್ಾಲದಲ್ಲಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಕನ್ನಡದ ಆರು ಸಣ್ಣ ಕಥಾ ಗುಚ್ಚವನ್ನು ಆಡಿಯೋ ಬುಕ್ ಆಗಿ ಪರಿವತರ್ಿಸಿ ಸಾರ್ವಜನಿಕರಿಗೆ ಸಿಡಿ ರೂಪದಲ್ಲಿ ಮಾರಟ ಮಾಡುತ್ತಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಟರು ಹಾಗೂ ಸಂಗೀತಗಾರರಾದ  ಪ್ರಕಾಶ್ ರೈ, ಟಿ.ಎಸ್.ನಾಗಭರಣ, ಸುಚೇಂದ್ರ ಪ್ರಸಾದ್,ರಕ್ಷಿತ್ ಶೆಟ್ಟಿ, ಎಂ.ಡಿ.ಪಲ್ಲವಿ ಮತ್ತು ಕಿಶೋರ್ ಈ ಸಣ್ಣ ಕತೆಗಳಿಗೆ ದ್ವನಿಯಾಗಿದ್ದಾರೆ.ಇದು ಲಾಭದಾಯಕ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಲ್ಲ.ಇಲ್ಲಿ ಗಳಿಸುವ ಶೇ 100 ಲಾಭವನ್ನು ಗಡಿನಾಡ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುವ ಕೆಲಸ ನಡೆಯುತ್ತಿದೆ.ಈ ತಾಣದ ಮೂಲಕ ಸಹೃದಯ ಕನ್ನಡ ಸಾಹಿತ್ಯಾಭಿಮಾನಿಗಳು ಸಿಡಿಯನ್ನು ಖರೀದಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಬಹುದು.

4.ಕೆಂಡ ಸಂಪಿಗೆ 

ಕನ್ನಡದ ಖ್ಯಾತ ಕಥೆಗಾರ, ಅಂಕಣಕಾರ, ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಕರಾದ ಅಬ್ದುಲ್ ರಶೀದ್ ಸುಂಟಿಕೊಪ್ಪರವರ ಸಾರಥ್ಯದಲ್ಲಿ ಪ್ರಾರಂಭವಾದ ಕನ್ನಡದ ಹೆಮ್ಮೆಯ ಸಾಹಿತ್ಯಿಕ ಜಾಲತಾಣ ಕೆಂಡ ಸಂಪಿಗೆ ತನ್ನ ಕನ್ನಡ ಸೇವೆಯನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಿದೆ. ಸುಮಾರು ಮೂರ್ನಾಲಕ್ಕು ವರ್ಷಗಳ ಕಾಲ ಕನ್ನಡಿಗರ ಅಚ್ಚು ಮೆಚ್ಚಿನ ಸಾಹಿತ್ಯಿಕ ಜಾಲತಾಣವಾಗಿ ಕಾರ್ಯನಿರ್ವಹಿಸಿ ಹಲವಾರು ಯುವ ಬರಹಗಾರರ ಬಳಗವನ್ನು ಸೃಷ್ಟಿಸಿದ  ಕೆಂಡ ಸಂಪಿಗೆ, ಕನ್ನಡ ಅಂತರ್ಜಾಲ ಜಗತ್ತಿನೊಂದಿಗೆ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಶಿಸ್ತು ಬದ್ಧ ,ಟೀಮ್ ವರ್ಕ್ನೊಂದಿಗೆ, ಫಲಾಪೇಕ್ಷೆ ಇಲ್ಲದೆ ದುಡಿದು, ಹೊಸ ರೀತಿಯ ಮಾಧ್ಯಮ ಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಸ್ಥಾಪಿತವಾಗುವಂತೆ ಮಾಡಿದ ಕೀರ್ತಿ ಕೆಂಡಸಂಪಿಗೆಗೆ ಸಲ್ಲುತ್ತದೆ. ಇನ್ನೂ ಸಂಪದದಂತಹ ಬ್ಲಾಗ್ಗಳು ಸಾಹಿತ್ಯಕ ಮಾನದಂಡವನ್ನಿಟ್ಟುಕೊಂಡು ನಿರೂಪಿತಗೊಂಡು ಪ್ರಸ್ತುತ ಎಲ್ಲ ವರ್ಗದ ಓದುಗರನ್ನು ಆಕರ್ಷಿಸುತ್ತಿದೆ.

5.ಫೇಸ್ಬುಕ್ನಲ್ಲಿ ಕನ್ನಡ ಬಳಕೆ

ಪ್ರಸ್ತುತ ದಿನಗಳಲ್ಲಿ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯಿಕವಾಗಿ ಕನ್ನಡ ಬಳಕೆಯಾಗುತ್ತಿರುವುದು ಸಂತಸದ ಸಂಗತಿಯೇ ಸರಿ. ಹಲವಾರು ಸಾಹಿತ್ಯ ಗುಂಪುಗಳು ಸಕ್ರಿಯವಾಗಿ ಭಾಷಿಕ ನೆಲೆಯಿಂದ, ಸಾಮಾಜಿಕ ನೆಲೆಯಿಂದ ಕಾರ್ಯನಿರ್ವಹಿಸುತ್ತಿವೆ. ಅ ಮೂಲಕ ಫೇಸ್ಬುಕ್  ಹೆಚ್ಚು -ಹೆಚ್ಚು ಕನ್ನಡ ಮನಸುಗಳನ್ನು  ಸೃಷ್ಟಿಸುವ ಕಖರ್ಾನೆಯಾಗಿದೆ.ಇಲ್ಲಿ ಓದಿನೊಂದಿಗೆ ಅಭಿಪ್ರಾಯ ವಿನಿಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ.

6.ಕನ್ನಡ ವಿಕೀಪಿಡಿಯಾ ಬರಹ

ಕನ್ನಡ ಮಾತ್ರವಲ್ಲದೇ ವಿಶ್ವದ ಹಲವಾರು ಭಾಷೆಗಳಲ್ಲಿ ಮಾಹಿತಿಯನ್ನೊದಗಿಸುವ ತಾಣವೇ ವಿಕೀಪಿಡಿಯಾ. ಕನ್ನಡದಲ್ಲಿ ವಿಕೀಪಿಡಿಯಾ ಬರಹಗಳು ತುಂಬಾ ಕಡಿಮೆ . ಪವನಜರಂತಹ ಗ್ಯಾಜಟಿಯರ್ ತಜ್ಞರ ಗುಂಪು ವಿಕೀಪಿಡಿಯಾ ಬರಹಕ್ಕೆ ಹಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಮಾಹಿತಿಯೇ ವಿಕೀಪಿಡಿಯಾದ ಮೂಲಗುರಿ .ಇಲ್ಲಿ ಸಾಹಿತಿಕ ಬರಹಗಳನ್ನು ವೈಯಕ್ತಿಕ ಅಭಿಪ್ರಾಯಗಳನ್ನು ಒಡಮೂಡಿಸುವಂತಿಲ್ಲ. ಬದಲಾಗಿ ಮಾಹಿತಿಗಳಾದ ಕವಿ ಪರಿಚಯ, ಪುಸ್ತಕದ ಮಾಹಿತಿ ಇತ್ಯಾಧಿಗಳನ್ನು ದಾಖಲೀಕರಿಸಬಹುದು.

ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕನ್ನಡ ಜ್ಞಾನ ಶಾಖೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಾದ ಜವಾಬ್ದಾರಿ ಯುವ ಲೇಖಕರ ಮೇಲಿದೆ. ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಬರೆಯುವ ಮೂಲಕ ಲೇಖಕನ ಬರಹಗಳು ಪ್ರಕರಗೊಳ್ಳುತ್ತದೆ.

ಕನ್ನಡ ಸಾಹಿತ್ಯಿಕ ನೆಲೆಯಿಂದ ಅಂತರ್ಜಾಲ ಬರಹದ ಪ್ರಮುಖ ಸವಾಲುಗಳು

ಕನ್ನಡದಲ್ಲಿ ಬ್ಲಾಗ್ ಬರಹಗಾರರು ಹೇರಳವಾಗಿ ದೊರೆತರು ಅವರೆಲ್ಲರು ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿ ಬರೆಯುವವರಲ್ಲ. ಹೆಚ್ಚಿನವರು ತಾಂತ್ರಿಕ ಬರಹಕ್ಕೂ, ವರದಿ ಬರಹಕ್ಕೂ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಾರೆ.
ಇಂಟರ್ನೇಟ್ಗೆ ಅಫ್ಲೋಡ್ ಮಾಡುವ ಲೇಖನಗಳನ್ನು ನುಡಿ, ಬರಹಗಳಂತಹ ತಂತ್ರಾಂಶದಲ್ಲಿ ಟೈಫ್ ಮಾಡಿ, ಅದನ್ನು ಯೂನಿಕೋಡ್ ಪಾಂಟ್ಗೆ ಬದಲಾಯಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ತಾಂತ್ರಿಕ ದೋಷಗಳು ಸಂಭವಿಸುತ್ತದೆ.
ಹೆಚ್ಚಿನವರು ಬ್ಲಾಗ್ ಆರಂಭಿಸಿ ಅರ್ಧದಲ್ಲಿ ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಗುರುತಿಸಬಹುದು.
ನಿರ್ದಿಷ್ಟವಾದ ಸಾಹಿತ್ಯ ಕ್ಷೇತ್ರಕ್ಕೆ ಅಂತ ಹೇಳಿ ಬ್ಲಾಗ್ಗಳನ್ನು ಮೀಸಲಿರಿಸುವ ಬರಹಗಾರರು ಕಡಿಮೆ. ಕಾರಣ ಲೇಖಕ ತನಗೆ ತೋಚಿದ ಅನೇಕ ವಿಚಾರಧಾರೆಗಳನ್ನು ತನ್ನ ಬ್ಲಾಗ್ನಲ್ಲಿ ಅಭಿವ್ಯಕ್ತಿಸುವವನಾಗಿರುತ್ತಾನೆ.
ಶ್ರೇಷ್ಠ ಸಾಹಿತಿಗಳ ಬ್ಲಾಗ್ಗಳು ಹೆಚ್ಚು ಪ್ರಚುರವಾದ ಪ್ರಸರಣೆಯನ್ನು ಸಾಧಿಸುತ್ತದೆ. ಅಲ್ಲಿನ ಓದುಗರೆಲ್ಲಾ ಅ ಸಾಹಿತಿಯ ಹಿಂಬಾಲಕರೊ, ಸಾಹಿತ್ಯ ವಲಯಕ್ಕೆ ಸೇರಿದವರಾಗಿರುತ್ತಾರೆ. ಅದರೆ ಸಾಮಾನ್ಯ ಬರಹಗಾರನ ಬ್ಲಾಗ್ ಓದಲು ಮನಸ್ಸು ಮಾಡುವವರ ಸಂಖ್ಯೆ ತುಂಬಾ ಕಡಿಮೆ.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಬರಹಗಳನ್ನು ಓದುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಸವಾಲಾಗಿ ಪರಣಮಿಸಿದೆ.
ಸಮಯದ ಅಭಾವ,ಟೈಮ್ ಮ್ಯಾನೆಜ್ ಮಾಡುವ ಬರದಲ್ಲಿ ಬ್ಲಾಗ್ ಓದುವ, ಬರೆಯುವ ಕೆಲಸಕ್ಕೆ ಜನರು ಪೂರ್ಣ ವಿರಾಮ ಹಾಕಿದ್ದಾರೆ.
ಬದಲಾದ ಯುಗದ ದ್ವಂದ್ವಗಳಿಗನುಗುಣವಾಗಿ ಕನ್ನಡ ಸಾಹಿತ್ಯ ಪ್ರಕಟಿತ ಮಡಿವಂತಿಕೆಯಿಂದ ಮುಕ್ತವಾಗಲು ಇನ್ನೂ ಸಾಧ್ಯವಾಗಲ್ಲ.
ಕೆಲವಾರು ಸಾಹಿತಿಗಳು, ಪ್ರಕಾಶಕರು ಬ್ಲಾಗ್ ಓದು, ವಿಕ್ಷಣೆ ತಮ್ಮ ಬುಡಕ್ಕೆ ಬಂದ ಕೊಡಲಿ ಪಟ್ಟೆಂದು ಬಾವಿಸಿಕೊಂಡಿದ್ದಾರೆ. ಕಾರಣ ಅಂತರ್ಜಾಲ ಸಂಸ್ಕೃತಿಯು ಪುಸ್ತಕ  ಓದುವ ಕಲೆಯನ್ನು ನಾಶಪಡಿಸುತ್ತದೆಂಬ ಅಂಬೋಣ. ಅದರೆ ಇಂದು ಅಂತಜರ್ಾಲದ ಮೂಲಕ ಇ-ಬುಕ್, ಅಡಿಯೋ ಬುಕ್ ಪರಿಕರಗಳು ಸುಲಭವಾಗಿ  ದೊರೆಯುತ್ತದೆ. ಅ ಮೂಲಕ ನವಯುಗದ ಯುವಕರಲ್ಲಿ ಸಾಹಿತಿಕ ಓದಿನ ಆಸಕ್ತಿಯನ್ನು ರೂಪಿಸಲಾಗಿದೆ.

ಮುಸ್ತಫ.ಕೆ.ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ.