ಸೋಮವಾರ, ಏಪ್ರಿಲ್ 27, 2015

ಕನ್ನಡ ಸಾಹಿತ್ಯ ವಾಗ್ವಾದಗಳು-ಪುಸ್ತಕ ವಿಮರ್ಶೆ

ಲೇಖಕರು-ರಹಮತ್ ತರೀಕೆರೆ
ಪುಸ್ತಕದ ಬೆಲೆ-120 ರೂ
ಪ್ರಕಾಶಕರು-ಪ್ರಸಾರಾಂಗ  ಕನ್ನಡ ವಿಶ್ವವಿದ್ಯಾನಿಲಯ ಹಂಪಿ
ವರ್ಷ-2012

ಸಾಹಿತ್ಯದ ಓದು ಸಮಾಜ ಸಂಸ್ಕೃತಿಯೊಂದಿಗೆ ನಡೆಸುವ ಅನುಸಂಧಾನ. ಸಮಾಜವನ್ನು ಸಂವೇಧನಾತ್ಮಕ ನೆಲೆಯಿಂದ ಅರ್ಥಹಿಸಲು ಸಾಹಿತ್ಯದ ಅಧ್ಯಯನ ಪೂರಕವಾಗಿದೆ. ಸಾಹಿತ್ಯದ ಓದು ಸೂಕ್ಷ್ಮವಾದ ಸಂವೇಧನಶೀಲತೆಯುಳ್ಳ ಮಾನವನಾಗಿ ನಮ್ಮನ್ನ ಪರಿವರ್ತಿಸುತ್ತದೆ. ಸೃಜನಶೀಲ ಚಟುವಟಿಕೆಗಳ ಅಭಿವ್ಯಕ್ತಿಯ ನೆಲೆಯೆ ಸಾಹಿತ್ಯ.

ಓದು ವಿಮರ್ಶೆಗೆ ನಮ್ಮನ್ನು ಗುರಿಪಡಿಸುವ ಮೂಲಕ ಹೊಸ ಬಗೆಯ ಒಳವನ್ನು ನಿರೂಪಿಸುತ್ತದೆ. ಆ ಮೂಲಕ ಚದುರಿಹೋದ ಜ್ಞಾನದ ಜಿಙ್ಞಾಸೆಯನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಸಾಹಿತ್ಯದ ಭಾಷೆ ವ್ಯವಹಾರಿಕ ಭಾಷೆಯಲ್ಲ. ವಿಮರ್ಶೆಯು ಸಾಹಿತ್ಯದ ಭಾಷೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿಮರ್ಶೆ ಪಾಶ್ಚಾತ್ಯರ ಪ್ರಭಾವದಿಂದ ಹುಟ್ಟಿಕೊಂಡ ಚಿಂತನ ಮಾದರಿ. ಸಾಹಿತ್ಯಕ ಚೌಕಟ್ಟಿನಿಂದ ಪಲ್ಲಟಗೊಂಡರೆ ಸೈದಾಂತಿಕ ತರ್ಕಗಳನ್ನು ಒಡಮೂಡಿಸುವುದು ವಿಮರ್ಶೆಯ ಜಾಯಮಾನ. ಸಾರ್ವಜನಿಕ ಮತ್ತು ವೈಯಕ್ತಿಕ ಅಭಿಪ್ರಾಯಗಳ ಸಂಯೋಜನೆಯ ಮೂಲಕ ಕರ್ತುವಿನ ಬರಹಗಳಿಗೆ ಪರ-ವಿರುದ್ಧ, ದಾಳಿ-ಪ್ರತಿದಾಳಿಗಳು ವಿಮರ್ಶಾ ಚೌಕಟ್ಟಿನ ಮೂಲಕ ಅಭಿವ್ಯಕ್ತವಾಗುತ್ತದೆ. ಅದು ಒಂದು ರೀತಿಯಲ್ಲಿ ಕೃತಿಯ ಮೌಲ್ಯವನ್ನು, ಲೇಖಕನ ವರ್ಚಸನ್ನು ಹೆಚ್ಚಿಸಲೂಬಹುದು, ಕುಂದಿಸಲೂಬಹುದು.

ರಹಮತ್ ತರೀಕೆರೆ
ವಿಮರ್ಶೆಯ ಚೌಕಟ್ಟಿನಿಂದ ಹೊರಗುಳಿಯುವ ಮೂಲಕ ವಿರೋಧಾಭಾಸದ ನೆಲೆಯಲ್ಲಿ ಕೃತಿಯೊಂದು ಚರ್ಚಿತವಾಗಿ, ಹೊಸದೊಂದು ವಾಗ್ವಾದಕ್ಕೆ ಕೃತಿ ಮತ್ತು ಲೇಖಕ ಗುರಿಯಾಗುವುದು ಸಹಜ. ಇದನ್ನು ವಿವಾದಾತ್ಮಕ ವಿಚಾರಧಾರೆಯ     ವಿಮರ್ಶಯ ಸ್ಥರವೆಂದು, ಸಾಹಿತ್ಯಕ ವಾಗ್ವಾದವೆಂದು ಕರೆಯಬಹುದು.

ಡಾ. ರಹಮತ್ ತರೀಕೆರೆಯವರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಯೋಜನೆಯ ಮೂಲಕ, 'ಕನ್ನಡ ಸಾಹಿತ್ಯ ವಾಗ್ವಾದಗಳು' ಎಂಬ ಪುಸ್ತಕವನ್ನು 2012ರಲ್ಲಿ ಬರೆದು ಪ್ರಕಟಿಸಿದರು.  20ನೇ ಶತಮಾನದಿಂದಿಚೆಗೆ ಕನ್ನಡ ಸಾಹಿತ್ಯದಲ್ಲಿ ನಡೆದ ಪ್ರಮುಖ ವಾಗ್ವಾದಗಳನ್ನು ಈ ಕೃತಿ ಕುಲಂಕುಶವಾಗಿ ಚರ್ಚಿಸುತ್ತದೆ. ಆರೋಗ್ಯಕರ ನಾಗರಿಕ ಸಮಾಜ ಕಟ್ಟಲು ಜರೂರಾಗಿ ಅಗತ್ಯವಿರುವುದು ಗಲಭೆಗಳಲ್ಲ, ಸಾಹಿತ್ಯಕ ವಾಗ್ವಾದಗಳು. ಅವುಗಳು ಸಮುದ್ರ ಮಥನವಿದ್ದಂತೆ. ಅಲ್ಲಿ ಹಾಲಾಹಲವು ಅಮೃತವೂ ಒಟ್ಟಿಗೆ ಹುಟ್ಟಿ ಬರುತ್ತವೆ. ಕೆಲವೊಮ್ಮೆ ಬರೀ ಉಪ್ಪು ನೀರು ಮೇಲೇಳುವುದೂ ಉಂಟು ಎಂಬ ಲೇಖಕರ ಪೀಠಿಕೆಯ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ.

ಕೃತಿಯ ಆರಂಭವನ್ನು ಲೇಖಕರ ಅಭಿಪ್ರಾಯ ಮಂಡನೆಯ ಮೂಲಕ ಗುರುತಿಸಬಹುದು. ಕನ್ನಡ ಸಾಹಿತ್ಯ ಚರಿತ್ರೆಯ ಒಟ್ಟು ವಾಗ್ವಾದಗಳನ್ನು ಎತ್ತಿಕೊಳ್ಳದೆ, ಸೂಕ್ಷ್ಮ ರೀತಿಯಲ್ಲಿ ಹೆಚ್ಚು ಪ್ರಚುರವು, ಅರ್ಥಪೂರ್ಣವು ಅದಂತಹ ಕೆಲವಾರು ವಾಗ್ವಾದಗಳನ್ನು ಈ ಕೃತಿ ಕೈಗೆ ಎತ್ತಿಕೊಂಡಿದೆ. ಬಿಎಂಶ್ರಿ, ಬೇಂದ್ರೆ, ಶಂಬಾ, ಮಾಸ್ತಿ, ತಿರುಮಲಾಂಬ, ಡಿವಿಜಿ, ಕುವೆಂಪು, ತೀನಂಶ್ರಿ, ದೇವುಡು, ರಾಜರತ್ನಂ, ಅನಕೃ, ನಿರಂಜನ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕೆ. ವಿ. ಸುಬ್ಬಣ್ಣ, ಚಂದ್ರಶೇಖರ ಕಂಬಾರ, ಎಂ.ಎಂ.ಕಲಬುರ್ಗಿ, ಕಿರ್ತಿನಾಥ ಕುರ್ತುಕೋಟಿಯಂತಹ ಸಾಹಿತಿಗಳು ಕನ್ನಡ ಸಾಹಿತ್ಯದ ಪ್ರಮುಖ ವಾಗ್ವಾದಗಳಲ್ಲಿ ಭಾಗವಹಿಸಿ ತಮ್ಮ ಸೈದಾಂತಿಕ ಅಭಿವ್ಯಕ್ತಿಯ ನೆಲೆಗಟ್ಟುಗಳನ್ನು, ತಾತ್ವಿಕ ಸಂಘರ್ಷಗಳನ್ನು ಅತ್ಯಂತ ಪ್ರಬುದ್ಧವಾಗಿ ನಿರ್ವಚಿಸಿದರು.
ವಿಪರ್ಯಾಸವೆಂದರೆ ಸಾಹಿತ್ಯ ಚಿಂತನಾ ಮಾದರಿಯ ವಾಗ್ವಾದಗಳು ನಡೆದರು ಅವುಗಳ ಹಿಂದೆ, ಕರ್ತುವಿನ ಸಾಮಾಜಿಕ, ರಾಜಕೀಯ ತಾತ್ವಿಕತೆಯೇ ಮುಖ್ಯ ಭೂಮಿಕೆಯಾಗಿಯೇ ನಿರೂಪಿತವಾಯಿತು. ಪಂಥಿಯ ಚಿಂತನೆಗಳಂತು ಪ್ರಬಲವಾಗಿ ಒಡಮೂಡುವ ಮೂಲಕ ಸಾಮಾಜಿಕ ಐಡೆಂಟಿಟಿಗಾಗಿ ವಾಗ್ವಾದಗಳು ಗಟ್ಟಿಯಾಗಿಂಯೇ ದ್ವನಿಯನ್ನು ಮೂಳಗಿಸಿತು. ಆದರೆ ಡಾ. ರಹಮತ್ ತರೀಕೆರೆಯವರು ಈ ಮಾದರಿಯ ಅಭಿಪ್ರಾಯಗಳನ್ನು, ವಾಗ್ವಾದಗಳನ್ನು ತಮ್ಮ ಕೃತಿಯಲ್ಲಿ ಅತ್ಯಂತ ಸೂಕ್ಷ್ಮವಾಗಿ, ಯಾರಿಗೂ ಗಾಸಿಯಾಗದಂತೆ ನಿರ್ವಹಿಸಿರುವುದು ಸಾಹಿತ್ಯಕ ಬೆಳವಣಿಗೆಯ ದೃಷ್ಟಿಯಿಂದ ಸಮಂಜಸವಾಗಿದೆ.
ಇನ್ನೂ ಸಾಹಿತಿಗಳಲ್ಲದ ಎಂ.ಡಿ ನಂಜುಂಡಸ್ವಾಮಿ, ಶಾಂತವೇರಿ ಗೋಪಾಲ ಗೌಡ, ಬಸವಲಿಂಗಪ್ಪ, ಬಿ.ಕೃಷ್ಣಪ್ಪನವರು ಸಾಹಿತ್ಯಕ ವಾಗ್ವಾದಲ್ಲಿ ಭಾಗವಹಿಸಿರುವುದರ ಮೂಲಕ, ಹೊಸ ಬಗೆಯ ರಾಜಕೀಯ, ಸಾಮಾಜಿಕ ಕ್ರಾಂತಿಯ ಕಿಡಿಗಳಾಗಿ ಒಡಮೂಡಿದರು.

ಈ ಕೃತಿಯಲ್ಲಿ ನಾವೆಲು (1917), ರುದ್ರನಾಟಕ (1941), ಶೂದ್ರ ತಪಸ್ವಿ (1944), ಅಶ್ಲೀಲ ಸಾಹಿತ್ಯ (1952), ಚೆನ್ನಬಸವ ನಾಯಕ (1956), ದಲಿತ ದೃಷ್ಟಿಕೋನ (1980), ಬೂಸಾ ಸಾಹಿತ್ಯ (1973), ಕರ್ನಾಟಕ ಸಂಸ್ಕೃತಿ (1978), 'ಶ್ರೇಷ್ಠತೆ'ಯ ವಾಗ್ವಾದ (1990), ಸಂಗ್ಯಾ ಬಾಳ್ಯಾ (2005) ಹೀಗೆ ಹತ್ತು ಹಲವು ವಾಗ್ವಾದಗಳ ಕುರಿತು ವಿಶ್ಲೇಷಾತ್ಮಕವಾಗಿ ಚರ್ಚಿ ಸಲಾಗಿದೆ.

ಮೇಲೆ ವಿವರಿಸಲಾದ ವಾಗ್ವಾದದ ಪ್ರಕರಣಗಳನ್ನು ನಾಲ್ಕು ಭಾಗಗಳಾಗಿ ಲೇಖಕರು ವಿಭಾಗಿಸಿಕೊಂಡಿದ್ದು, ಮೊದಲನೇ ಭಾಗದಲ್ಲಿ ಪ್ರಕರಣಕ್ಕೆ ಕಾರಣವಾದ ಪೂರ್ವ ಪೀಠಿಕೆಯ ವಿಚಾರಧಾರೆಗಳನ್ನೂ, ಎರಡನೇ ಭಾಗದಲ್ಲಿ ವಾಗ್ವದಕ್ಕೆ ಕಾರಣವಾದ ಸಾಂಸ್ಥಿಕ ಚಿಂತನೆಗಳ ವಾದಮಂಡನೆಯನ್ನೂ ಒಳಗೊಂಡಿದೆ. ಮೂರನೇ ಭಾಗದಲ್ಲಿವ ವಾದ ಮಂಡನೆಗೆ ಪರ, ವಿರೋಧವಾಗಿ ಬಂದ ಪ್ರತಿಕ್ರಿಯೆಗಳನ್ನೂ, ಅಭಿಪ್ರಾಯಗಳನ್ನು ನಿರೂಪಿಸಲಾಗಿದೆ. ನಾಲ್ಕನೆಯ ಘಟದಲ್ಲಿ ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಪ್ರಶ್ನೆಗಳ ವಿಶ್ಲೇಷಣಾತ್ಮಕ ಚಚರ್ೆಗಳಿದೆ. ಕೊನೆಯಲ್ಲಿ ವಾಗ್ವಾದಕ್ಕೆ ಪೂರಕವಾದ ಟಿಪ್ಪಣಿ, ಪರಾಮರ್ಶನ ಗ್ರಂಥ ಹಾಗೂ ಇನ್ನಿತರ ಆಕರಗಳ ಮಾಹಿತಿಯನ್ನು ಒದಗಿಸಲಾಗಿದೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್
ನಾವೆಲು ವಾಗ್ವಾದವು ಕನ್ನಡದ ಖ್ಯಾತ ಸಾಹಿತಿ, ಸಣ್ಣ ಕಥೆಯ ಜನಕ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ವಿದ್ಯುಲ್ಲತಾ ಕಾದಂಬರಿ ರಚಿಸಿದ ನಂಜನಗೂಡಿನ ತಿರುಮಲಾಂಬ ಅವರ ನಡುವೆ ನಡೆಯಿತು. 1917ರಲ್ಲಿ ಕೃಷ್ಣ ಸೂಕ್ತಿ ಎಂಬ ಪತ್ರಿಕೆಯಲ್ಲಿ ತಿರುಮಲಾಂಬರ ವಿದ್ಯುಲತಾ ಕಾದಂಬರಿಗೆ ತೀಕ್ಷ್ಣವಾದ ವಿಮರ್ಶೆ ಬರೆಯುವ ಮೂಲಕ ವಾಗ್ವದಕ್ಕೆ ಚಾಲನೆ ದೊರೆಯಿತು. ಈ ಕುರಿತು ರಹಮತ್ ತರಿಕೇಕೆಯವರ ಈ ಕೃತಿಯು ವ್ಯಾಪಕವಾಗಿ ಚರ್ಚಿಸಲಾಗಿದೆ.
ರುದ್ರನಾಟಕ ವಾಗ್ವಾದವು 1941ರಲ್ಲಿ ಬಿ.ಎಂ.ಶ್ರೀ.ರವರ ಅಶ್ವತ್ಥಾಮನ್ ನಾಟಕ ಪ್ರಕಟಗೊಳ್ಳುವ ಮೂಲಕ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ಟ್ರಾಜಿಡಿ ಪರಿಕಲ್ಪನೆಯನ್ನು ಭಾರತೀಯ ಪುರಾಣಗಳ ಮೇಲೆ ಅನ್ವಯಿಸುವ ಮೂಲಕ ನಾಟಕವನ್ನು ಶ್ರೀ ರಚಿಸಿದ್ದು, ಪರ ವಿರೋಧ ಚರ್ಚೆಗಳು ನಡೆಯಲು ಕಾರಣವಾಯಿತು. ಅಶ್ವತ್ಥಾಮನ್ ನಾಟಕದಲ್ಲಿ ನಾಯಕ ದುರಂತೆಯ ಮೂಲಕ ಅಂತ್ಯ  ಕಾಣುವುದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು. ಕಾರಣ ನಾಯಕ ಅಶ್ವತ್ಥಾಮ ಚಿರಂಜೀವಿ ಎಂಬ ಪರಿಕಲ್ಪನೆಯನ್ನು ಭಾರತೀಯ ಪುರಾಣಗಳು ಕಟ್ಟಿಕೊಟ್ಟಿದ್ದವು. ಅಂತಹ ಸಾಂಸ್ಕೃತಿಕ ವಿಚಾರಧಾರೆಯನ್ನು ಪಲ್ಲಟಗೊಳಿಸುವ ಕೆಲಸವನ್ನು ಬಿಎಂಶ್ರೀ ಅವರು ಮಾಡಿದರು. ಇದು ಅಂದಿನ ಕಾಲಕ್ಕೆ ಮಹತ್ವ ಸಂಗತಿಯಾಯಿತು.

ಕುವೆಂಪು
ರಾಮಾಯಣದ ಉತ್ತರಕಾಂಡದಲ್ಲಿ ಒಡಮೂಡಿದ ಪ್ರಕ್ಪಿಪ್ತ ಕಥೆಯನ್ನು ಕುವೆಂಪು ಅವರು ಬದಲಾಯಿಸಿ, ರಾಮನ ವ್ಯಕ್ತಿತ್ವವನ್ನು ಉದಾತ್ತವಾಗಿ ಚಿತ್ರಿಸಿ, ಶೂದ್ರ ಶಂಬುಕನಿಗೂ ತಪಸ್ಸು ಮಾಡಲು ಅವಕಾಶ ಕಲ್ಪಸಿ,ಜಾತಿ ಗರ್ವಾಂಧರಿಗೆ ಪಾಠ ಕಲಿಸಲು ರಚಿತವಾದ ನಾಟಕವೇ ಶೂದ್ರ ತಪಸ್ವಿ. ಈ ನಾಟಕಕ್ಕೆ ಸಂಪ್ರದಾಯವಾದಿ ಬಲಪಂಥಿಯರಿಂದ ತೀವ್ರವಾದ ಅಕ್ಷೇಪವು ವ್ಯಕ್ತವಾಯಿತು. ಮಾಸ್ತಿ ಎಂದಿನಂತೆ ತಮ್ಮ ಟೀಕಾಸ್ತ್ರವನ್ನು ಕುವೆಂಪುರವರ ಶೂದ್ರತಪಸ್ವಿಯ ಮೇಲೆ ತೀಕ್ಷ್ಣವಾಗಿಯೇ ಪ್ರಯೋಗಿಸುವ ಮೂಲಕ ಶೂದ್ರ ತಪಸ್ವಿ ವಾಗ್ವಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಗೊಳ್ಳುವಂತೆ ಮಾಡಿದರು.

ಪ್ರಗತಿಶೀಲ ಪಂಥದ ಪ್ರಮುಖ ಲೇಖರರಾದ ಅ. ನ. ಕೃಷ್ಣರಾಯರು ರಚಿಸಿದ ನಗ್ನ ಸತ್ಯ (1950) ಹಾಗೂ ಶನಿಸಂತಾನ (1951), ಕಾದಂಬರಿಗಳು ಟೀಕಾಕಾರರ ಟೀಕೆಗೆ ಗುರಿಯಾಯಿತು. ಈ ಕೃತಿಗಳು ಸಹೃದಯರಲ್ಲಿ ಕೀಳು ಅಭಿರುಚಿಯ ಆಶ್ಲೀಲತೆಯನ್ನು ಪ್ರಚುರಪಡಿಸುತ್ತಿದೆ ಎಂದು ಕಲವು ಲೇಖಕರು ದೂರಿದರು. ಆ ಮೂಲಕ ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಗಳು ನಗ್ನ ಸತ್ಯ ಕೃತಿಯ ಕರ್ತುವನ್ನು ತೆಗಳುವ ದೈನಂದಿನ ಕಾಯಕವನ್ನು ಮಾಡಿತು.
1949ರಲ್ಲಿ ಹೊರಬಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚೆನ್ನಬಸವ ನಾಯಕ ಕಾದಂಬರಿಯು ಪ್ರಕಟವಾದಗ ಯಾವುದೇ ವಾಗ್ವಾದಕ್ಕೆ ಗುರಿಯಾಗಲಿಲ್ಲ. ಕೇಂದ್ರ ಸಾಹಿತ್ಯ ಆಕಾಡೆಮಿಯು 1956ರಲ್ಲಿ ಬೇರೆ ಬೇರೆ ಭಾಷೆಗಳಿಗೆ ಈ ಕಾದಂಬರಿಯನ್ನು ಅನುವಾದಿಸಲೆತ್ನಿಸಿದಾಗ ಸಮಸ್ಯೆಗಳು ಬುಗಿಲೇಳಲು ಶುರುವಾಯಿತು. ಕೆಳದಿ ರಾಜಮನೆತನದ ರಾಣಿ ವೀರಮ್ಮಾಜಿಯವರ ಚಾರಿತ್ರವಧಾ ಮಾಡಲಾಗಿದೆ ;ಎಂಬ ದ್ವನಿ ಲಿಂಗಾಯುತ ಸಮುದಾಗಳಲ್ಲಿ ಮೊಳಗಿತು. ಕೊನೆಗೆ ಲಿಂಗಾಯುತ ಮತ್ತು ಬ್ರಾಹ್ಮಣ ನಡುವೆ ಸಾಹಿತ್ಯಕ ವೈರುಧ್ಯಗಳು ನಿರೂಪಿತಗೊಂಡು, ಸಂಸತ್ನಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಅನುವಾದ ಕಾರ್ಯವನ್ನು ಅಕಾಡೆಮಿ ಸ್ಥಗಿತಗೊಳಿಸುವಂತೆ ತಿರ್ಮಾನಿಸಿತು.

ಪೂರ್ಣ ಚಂದ್ರ ತೇಜಸ್ವಿ
ಇನ್ನೂ ದಲಿತ ವಾಗ್ವಾದ ಮತ್ತು ಬೂಸಾ ಪ್ರಕರಣಗಳು ಕರ್ನಾಟಕದಲ್ಲಿ ದಲಿತ ಸಾಹಿತ್ಯದ ಬೆಳವಣಿಗೆಗೆ ಮಹತ್ವವಾದ ಕಾರಣವಾಯಿತು. ಸಾಹಿತಿಗಳಲ್ಲದ ಬಿ.ಕೃಷ್ಣಪ್ಪ ಹಾಗೂ ಮಂತ್ರಿ ಬಸವಲಿಂಗಪ್ಪನವರು ಈ ವಾಗ್ವಾದಗಳನ್ನು ಹುಟ್ಟುಹಾಕಿದರು. ಆ ಮೂಲಕ ಸಿದ್ದಲಿಂಗಯ್ಯ, ಡಿ.ಆರ್. ನಾಗರಾಜ್, ಶೂದ್ರ ಶೀನಿವಾಸ್ರಮತಹ ದಲಿತ ಸಂವೇಧನೆಯ ಲೇಖಕರು ಸೃಷ್ಟಿಯಾದರು.

ಡಾ. ಯು.ಆರ್. ಅನಂತಮೂರ್ತಿ ನವ್ಯದ ಶ್ರೇಷ್ಟತೆಯನ್ನು ಪ್ರತಿಪಾದಿಸುವ ದೃಷ್ಟಿಯಿಂದ 1978ರಲ್ಲಿ ಕುವೆಂಪು ಕಾದಂಬರಿಗಳಲ್ಲಿ ಸಂಸ್ಕೃತಿಯ ಎಂಬ ವಿಚಾರದ ಬಗ್ಗೆ ವಾಗ್ವಾದ ಪ್ರಾರಂಭಿಸಿದರು, ಭಾರತೀಯ ಸಂಸ್ಕೃತಿಯಲ್ಲಿ ಹೆಸರಲ್ಲಿ ಮಾಡಿದ ಈ ವಿಶ್ಲೇಷಣೆಗೆ, ಕುವೆಂಪು ಅವರ ಪುತ್ರ ತೇಜಸ್ವಿಯವರು ಕರ್ನಾಟಕ ಸಂಸ್ಕೃತಿಯ ಚಿಂತನಾ ಮಾದರಿಯಲ್ಲಿ ಉತ್ತರಿಸಿದರು. ಇದನ್ನು ಶೂದ್ರ ಬ್ರಾಹ್ಮಣ ಪ್ರಜ್ಞೆಯ ವಾಗ್ವಾದವೆಂದು ಕರೆಯುತ್ತಾರೆ.


ಯು.ಆರ್ ಅನಂತಮೂರ್ತಿ
ಮುಂದೆ ನವ್ಯರ ಶ್ರೇಷ್ಠತೆಯ ವಾಗ್ವಾದ, ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ ವಾಗ್ವಾದಗಳನ್ನು ರಹಮತ್ ತರೀಕೆರೆಯವರ ಕನ್ನಡ ಸಾಹಿತ್ಯ ವಾಗ್ವಾದಗಳು ಕೃತಿಯು ಕಟ್ಟಿಕೊಡುತ್ತದೆ. ಲೇಖಕರ ವಿಸ್ತೃತ ಜ್ಞಾನ, ನೂರಾರು ಪುಸ್ತಕಗಳ ವಿಚಾರಗಳನ್ನು ಪರಾಮರ್ಶಿಸಿ, ಅಭಿವ್ಯಕ್ತಿಸಿದ ವಿಚಾರಧಾರೆ, ಯಾವುದೇ ಪಂಥವನ್ನು ಬೆಂಬಲಿಸದ, ರಕ್ಷಿಸದ ಲೇಖಕರ ಮನಸ್ಥಿತಿ, ಈ ಒಂದು ಕೃತಿಯನ್ನು ಸಂಶೋಧನಾತ್ಮಕವಾಗಿ ಗಟ್ಟಿಗೊಳಿಸಿದೆ.

ಒಟ್ಟಿನಲ್ಲಿ ಕನ್ನಡ ಮನಸ್ಸುಗಳು ನಡೆಸಿದ ಈ ವಾಗ್ವಾದಗಳಲ್ಲಿ ಮೇಲುನೋಟಕ್ಕೆ ಸಾಹಿತ್ಯ ವಾಗ್ವಾದಗಳಾದರೂ, ಅಂತರ್ಯದಲ್ಲಿ ಕನ್ನಡ ಸಮಾಜದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಆಯಾಮಗಳನ್ನು ತನ್ನೊಳಗೆ ಬಚ್ಚಿಟ್ಟಿದೆ. ಸಾಂಸ್ಕೃತಿಕ ರಾಜಕೀಯ ಪ್ರಜ್ಞೆ, ಧಾರ್ಮಿಕ ಪಂಥಿಯ ಪ್ರಜ್ಞೆಗಳು ಕನ್ನಡದ ಪ್ರಮುಖ ಲೇಖಕರನ್ನು ಬಿಟ್ಟಿಲ್ಲವೆಂಬುವುದು ಒಂದು ರೀತಿಯಲ್ಲಿ ವಿಪರ್ಯಾಸವೇ ಸರಿ.

ಸಾಹಿತ್ಯ ಪ್ರವೇಶಿಸುವ ಯುವ ಕನ್ನಡ ಮನಸ್ಸುಗಳಿಗೆ ಈ ಕೃತಿಯು ಮಹತ್ವಪೂರ್ಣವಾದ ಚಾರಿತ್ರಿಕ ಅಂಶಗಳನ್ನು ಒದಗಿಸುವುದರಲ್ಲಿ ಸಂಶಯವಿಲ್ಲ.

ಮುಸ್ತಫ ಕೆ ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ.


 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ