ಸೋಮವಾರ, ಆಗಸ್ಟ್ 3, 2015

ಮಳೆಯಲಿ ಜೊತೆಯಲಿ ಆ ನೆನಪುಗಳು

ಅಂತರ್ಜಾಲ ಚಿತ್ರ
ನಾನು ಕೊಡಗು ಜಿಲ್ಲೆಯ ಸಣ್ಣ ಗ್ರಾಮವೊಂದರ ಅನಾಮಿಕ ಆಸಾಮಿ. ಒಂದಾನೊಂದು ಕಾಲದ ಕಥೆಯಿದು. ಅಲ್ಲ ಅಲ್ಲ ಅನುಭವಗಳ ಭಾವಶೀಲತೆ ಇದು. ನಮ್ ಕಡೆ ಮಳೆಗಾಲವೆಂದರೆ ಒಂದು ರೀತಿ ಸಂಭ್ರಮವು ಹೌದು ಬೇಸರವು ಹೌದು. ಕೃಷಿ ಚಟುವಟಿಕೆ ಚುರುಕಾಗುವ ಕಾಲವದು. ಆಧುನಿಕತೆಯ ಗಾಳಿ ಸೊಕದ ಗ್ರಾಮಗಳು ನಮ್ಮಲು ಇದೆ. ವಿದ್ಯುತ್ ದೂರವಾಣಿ ಸಂಪರ್ಕವಿಲ್ಲದೆ ಬದುಕಿನ ನವಿರಾದ ಅನುಭವಗಳನ್ನು ಪ್ರಕೃತಿಯ ಅಚ್ಚ ಹಸಿರಿನ ನಡುವೆ ಆಧುನಿಕತೆಯ ಜಂಜಾಟವಿಲ್ಲದೆ  ಕಳೆಯವ ನಾವು ಜೀವಜಗತ್ತಿನ ಸುಖಿ ಮನಗಳು. ಮಳೆಯ ನಡುವೆ ಬಿರು ಬಿಸುವ ಗಾಳಿ ಮನಸ್ಸನ್ನೆ ತಲ್ಲಣಗೊಳಿಸುತ್ತದೆ. ನದಿ ತೊರೆಗಳು ತುಂಬಿ ಹರಿಯುವ ಮೂಲಕ ಮನಗಳು ತುಂಬುತ್ತವೆ. ಆರ್ಭಟಿಸುವ ಮಳೆರಾಯ ಬದುಕನ್ನು ಹಸನುಗೊಳಿಸುವನು ಎಂಬ ಆಶಯ ಎಲ್ಲರ ಮನದಲ್ಲೂ ಚಿರಸ್ಥಾಯಿ. ಆದರೂ ಒಂದು ರೀತಿಯ ದುಗುಡ ಆತಂಕ.

ಜೂನ್ ತಿಂಗಳ ಆರಂಭಿಕ ಮಳೆಯಂತು ನಮ್ಮಂತಹ ಶಾಲಾ ವಿದ್ಯಾರ್ಥಿಗಳಿಗೆ ನರಕ ಸದೃಶ್ಯವೇ ಸರಿ. ಅದರೂ ಮಳೆಯನ್ನು ಶಪಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಮಳೆಯನ್ನು ಆಸ್ವಾದಿಸುವ ಭಾವಾಭಿವ್ಯಕ್ತಿಯನ್ನು ಇಲ್ಲಿನ ಜನರಲ್ಲಿ ಗುರುತಿಸಬಹುದು. ಮನೆಯಿಂದ ಮೂರು ನಾಲ್ಕು ಕಿ. ಮೀಟರ್ ದೂರದ ಶಾಲಾ ಕಾಲೇಜುಗಳಿಗೆ ಹಳ್ಳಿಗರಾದ ನಾವು ನಡೆದುಕೊಂಡೆ ಕ್ರಮಿಸಬೇಕು. ಕಾರಣ ಬಸ್ಸ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು. ಬಸ್ಸು ಮತ್ತು ಇತರ ವಾಹನ ವ್ಯವಸ್ಥೆ ಇದ್ದರು ಆರ್ಭಟಿಸುವ ಮಳೆ ಗಾಳಿಯಿಂದ ಮರಗಿಡಗಳು ರಸ್ತೆಗುರುಳಿ ನಮ್ಮನ್ನು ಮತ್ತೆ ಮತ್ತೆ ನಡೆಯುವಂತೆ ಮಾಡುತ್ತದೆ.

ಅಂತರ್ಜಾಲ ಚಿತ್ರ
ಅಪ್ಪನಲ್ಲಿ ಕಾಡಿ ಬೇಡಿ ತರಿಸಿಕೊಂಡ ಕಮಲದ ಗುರುತಿನ ಛತ್ರಿಯು ಎರಡೆ ಎರಡು ಮಳೆಗೆ ಮುರಿದು ಮನೆಯ ಅಟ್ಟ ಸೇರುತ್ತದೆ. ಛತ್ರಿ ಹಾಳು ಮಾಡಿದ್ದಕ್ಕಾಗಿ ಅಪ್ಪನಿಂದ ಪಟ್ಟುತಿಂದಿದ್ದು ಇದೆ. ವಿಪರೀತವಾದ ಗಾಳಿಯೊಂದಿಗಿನ ಮಳೆ ಇಡೀ ಸಮವಸ್ತ್ರವನ್ನೆ ಒದ್ದೆ ಮಾಡುತ್ತದೆ. ತರಗತಿಯೊಳಗೆ ಸ್ನೇಹಿತರೊಂದಿಗೆ ಅಂಟಿಕೊಂಡು ಕುಳಿತು ಚಳಿಯನ್ನು ಮರೆಯುವ ನಾವು, ಶಿಕ್ಷಕರ ಪೆಟ್ಟಿನೊಂದಿಗೆ ಮೈ ಬಿಸಿ ಮಾಡಿಕೊಳ್ಳುತ್ತೇವೆ. ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ಮನೆಯ ದಾರಿ ಹಿಡಿಯುವ ನಾವು ನದಿ ತೊರೆ ದಾಟಿ ಮಳೆಯ ಮಜಾ ಅನುಭವಿಸಿ ಅಮ್ಮ ಮಾಡಿಟ್ಟ ಅಡುಗೆಯನ್ನು ಮನದಲ್ಲಿಯೇ ನನೆದು ಮನೆ ಸೇರುತ್ತವೆ.

ಅಮ್ಮ ಮಳೆಗಾಲದಲ್ಲಿ ಮುಂಜಾನೆ ಮಾಡುವ ಬಿಸಿ ಬಿಸಿ ರೊಟ್ಟಿ ಮತ್ತು ಸಾರು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಆಡುಗೆ ಮನೆಯಲ್ಲಿ ಮಣ್ಣಿನ ಒಲೆಯ ಮುಂದೆ ಕುಳಿತು ಬೆಂಕಿಯ ಬಿಸಿಯನ್ನು ಆಸ್ವಾದಿಸುತ್ತಾ ಅಮ್ಮ ಮಾಡಿದ ಆಹಾರವನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಮಳೆಗಾಲದಲ್ಲಿ ನಮ್ ಕಡೆ ಹಲಸಿನ ಹಣ್ಣು ಹೆಚ್ಚಾಗಿ ದೊರೆಯುವ ಕಾರಣದಿಂದಲೂ ಏನೋ, ಹಲಸಿನ ಹಣ್ಣಿನ ದೋಸೆ, ಹಲಸಿನ ಕಡುಬು, ಮುಂತಾದ ಹಲಸಿನ ಪದಾರ್ಥಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇನ್ನೂ ಅಟಿ ತಿಂಗಳ 18 ರಂದು ಅಟಿ ಸೊಪ್ಪು ಎಂಬ 18 ಬಗೆಯ ಮೂಲಿಕೆ ಇರುವ ಸೊಪ್ಪಿನ ಪಾಯಸವನ್ನು ಮಾಡಲಾಗುತ್ತದೆ.

ಅಂತರ್ಜಾಲ ಚಿತ್ರ
ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವಾರು ಆಹಾರ ಪದ್ದತಿಯನ್ನು ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಗುರುತಿಸಬಹುದು. ಕೆಸದ ಎಲೆಯಿಂದ ಮಾಡುವ ಪತ್ರಡೆ ಇಲ್ಲಿನ ಚಳಿಗೆ ಉತ್ತಮ ಆಹಾರವಾಗಿದೆ. ಮಳೆಗಾಲದ ವಿಪರೀತವಾದ ಚಳಿಯನ್ನು ಮರೆಯುವ ಉದ್ದೇಶದಿಂದ ಕೊಡಗಿನ ಕೆಲವಾರು ಜನಾಂಗದವರು ಮದ್ಯಪಾನವನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಾಗಿ ಮಾಡಿಕೊಂಡಿದ್ದಾರೆ. ಮಾಂಸ ಪ್ರಿಯರಾದ ನಾವು ಅಟಿ ತಿಂಗಳಿನಲ್ಲಿ ಬೇಸಾಯದ ಕ್ಲಿಷ್ಟತೆಯನ್ನು ಮರೆಯಲು, ಮಳೆಯಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನಾಟಿ ಕೋಳಿಯ ಪದಾರ್ಥವನ್ನು, ನಾಟಿ ಔಷಧಿಗಳನ್ನು ಹೆಚ್ಚಾಗಿ ಬಳಸುವುದನ್ನು ಕಾಣಬಹುದು. ಕಾಡಿನಲ್ಲಿ ದೊರೆಯುವ ಕಾಡು ಮಾವಿನ ಹಣ್ಣಿನ ಸಾರು, ಗುಡುಗು ಸಿಡಿಲಿನ ಪ್ರಭಾವದಿಂದ ದೊರೆಯುವ ಅಣಬೆಯ ಸಾರು, 3-4 ದಿನ ನೆನೆಸಿಟ್ಟು ಮಾಡುವ ಕಣಿಲೆಯ ಸಾರು ಕೊಡಗಿನ ಮಳೆಗಾಲದ ಪ್ರಮುಖ ಆಹಾರವೆಂದರೆ ತಪ್ಪಾಗಲಾರದು.

ಮಳೆಯ ನಡುವೆ ಕಾಫಿ ತೋಟದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತಲೆಗೆ ಕಟ್ಟಿ ಕೆಲಸ ಮಾಡುವ ಕೂಲಿ ಕಾಮರ್ಿಕರ ಪರಿಸ್ಥಿತಿಯಂತು ಹೇಳ ತೀರದ್ದು. ತೋಟಗಳು ಕಡಿದಾದ ಇಳಿಜಾರು ಪ್ರದೇಶದಲ್ಲಿರುವುದರಿಂದ ತಿಗಣೆಗಳು ಮಾನವ ದೇಹದಿಂದ ರಕ್ತ ಇರುವ ಕೆಲಸವನ್ನು ಸರಾಗವಾಗಿ ಮಾಡುತ್ತದೆ. 

ಅಂತರ್ಜಾಲ ಚಿತ್ರ
ವಿದ್ಯುತ್ ಸಂಪರ್ಕ ಇರುವ ಕೆಲವಾರು ಪ್ರದೇಶಗಳಲ್ಲಿ ವಿಪರೀತ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ನೆಲಕುರುಳುವ ಮೂಲಕ  ವಾರಗಟ್ಟಲೆ ಕರೆಂಟ್ ಇಲ್ಲದೆ ಕತ್ತಲಲ್ಲಿರುವ ಪರಿಸ್ಥಿತಿಯನ್ನು ನಮ್ ಕಡೆ ಕಾಣಬಹುದು. ನದಿಯ ಹತ್ತಿರವಿರುವ ಮನೆಗಳಿಗೆ ನೀರು ನುಗ್ಗಿ ಜನರ ಬದುಕನ್ನು ಅತಂತ್ರಗೊಳಿಸುವ ಪ್ರಸಂಗ, ಕಟ್ಟಡಗಳ ಗೋಡೆ ಉರುಳಿ ಸಾವಾಗುವ ಸಂಭವವನ್ನು ಕೊಡಗಿನ ಮಳೆಯ ಸಂದರ್ಭ ಗುರುತಿಸಬಹುದು. ಒಮ್ಮೋಮ್ಮೆ ಆಧಿಕ ಮಳೆಯಾದಾಗ ಶಾಲಾ ಕಾಲೇಜಿಗೆ ರಜೆ ನೀಡಿದಾಗಲಂತು ವಿದ್ಯಾರ್ಥಿಗಳಿಗೆ ಮಜವೇ ಮಜ.

ಗ್ರಾಮೀಣ ಬದುಕಿನ ಜೀವಪರವಾದ ಜೀವನ ಶೈಲಿ ಇಂದು ಸ್ವಲ್ಪ ಸ್ವಲ್ಪವಾಗಿಯೇ ನಾಶಹೊಂದುತ್ತಿದೆ. ಅರಣ್ಯ ನಾಶದಿಂದಾಗಿ ಮಳೆಯು ಕಡಿಮೆಯಾಗಿದೆ. ಭಾವನೆಗಳನ್ನು ಮತ್ತೆ ಮತ್ತೆ ಪುಟಿಯುವಂತೆ ಮಾಡುವ ಆ ಕಾಲದ ಮಳೆಯು ಆಧುನಿಕತೆಯ ಕರಿ ನೆರಳಿನಿಂದ ಜೀವ ವಿನಾಶದತ್ತ ನಮ್ಮನ್ನ ಕೊಂಡೊಯ್ಯತ್ತಿದೆ. ಮತ್ತೆ- ಮತ್ತೆ ಕಾಡುವ ಆ ನೆನಪು ಪ್ರಕೃತಿಯ ಚಿಗುರಿನಂತೆ ಹಸನಾಗಲಿ ಎಂಬುದೇ ಎಲ್ಲರ ಆಶಯ.

ಮುಸ್ತಫ ಕೆ ಎಚ್
ದ್ವಿತೀಯ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ.