ಸೋಮವಾರ, ಆಗಸ್ಟ್ 3, 2015

ಮಳೆಯಲಿ ಜೊತೆಯಲಿ ಆ ನೆನಪುಗಳು

ಅಂತರ್ಜಾಲ ಚಿತ್ರ
ನಾನು ಕೊಡಗು ಜಿಲ್ಲೆಯ ಸಣ್ಣ ಗ್ರಾಮವೊಂದರ ಅನಾಮಿಕ ಆಸಾಮಿ. ಒಂದಾನೊಂದು ಕಾಲದ ಕಥೆಯಿದು. ಅಲ್ಲ ಅಲ್ಲ ಅನುಭವಗಳ ಭಾವಶೀಲತೆ ಇದು. ನಮ್ ಕಡೆ ಮಳೆಗಾಲವೆಂದರೆ ಒಂದು ರೀತಿ ಸಂಭ್ರಮವು ಹೌದು ಬೇಸರವು ಹೌದು. ಕೃಷಿ ಚಟುವಟಿಕೆ ಚುರುಕಾಗುವ ಕಾಲವದು. ಆಧುನಿಕತೆಯ ಗಾಳಿ ಸೊಕದ ಗ್ರಾಮಗಳು ನಮ್ಮಲು ಇದೆ. ವಿದ್ಯುತ್ ದೂರವಾಣಿ ಸಂಪರ್ಕವಿಲ್ಲದೆ ಬದುಕಿನ ನವಿರಾದ ಅನುಭವಗಳನ್ನು ಪ್ರಕೃತಿಯ ಅಚ್ಚ ಹಸಿರಿನ ನಡುವೆ ಆಧುನಿಕತೆಯ ಜಂಜಾಟವಿಲ್ಲದೆ  ಕಳೆಯವ ನಾವು ಜೀವಜಗತ್ತಿನ ಸುಖಿ ಮನಗಳು. ಮಳೆಯ ನಡುವೆ ಬಿರು ಬಿಸುವ ಗಾಳಿ ಮನಸ್ಸನ್ನೆ ತಲ್ಲಣಗೊಳಿಸುತ್ತದೆ. ನದಿ ತೊರೆಗಳು ತುಂಬಿ ಹರಿಯುವ ಮೂಲಕ ಮನಗಳು ತುಂಬುತ್ತವೆ. ಆರ್ಭಟಿಸುವ ಮಳೆರಾಯ ಬದುಕನ್ನು ಹಸನುಗೊಳಿಸುವನು ಎಂಬ ಆಶಯ ಎಲ್ಲರ ಮನದಲ್ಲೂ ಚಿರಸ್ಥಾಯಿ. ಆದರೂ ಒಂದು ರೀತಿಯ ದುಗುಡ ಆತಂಕ.

ಜೂನ್ ತಿಂಗಳ ಆರಂಭಿಕ ಮಳೆಯಂತು ನಮ್ಮಂತಹ ಶಾಲಾ ವಿದ್ಯಾರ್ಥಿಗಳಿಗೆ ನರಕ ಸದೃಶ್ಯವೇ ಸರಿ. ಅದರೂ ಮಳೆಯನ್ನು ಶಪಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಮಳೆಯನ್ನು ಆಸ್ವಾದಿಸುವ ಭಾವಾಭಿವ್ಯಕ್ತಿಯನ್ನು ಇಲ್ಲಿನ ಜನರಲ್ಲಿ ಗುರುತಿಸಬಹುದು. ಮನೆಯಿಂದ ಮೂರು ನಾಲ್ಕು ಕಿ. ಮೀಟರ್ ದೂರದ ಶಾಲಾ ಕಾಲೇಜುಗಳಿಗೆ ಹಳ್ಳಿಗರಾದ ನಾವು ನಡೆದುಕೊಂಡೆ ಕ್ರಮಿಸಬೇಕು. ಕಾರಣ ಬಸ್ಸ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು. ಬಸ್ಸು ಮತ್ತು ಇತರ ವಾಹನ ವ್ಯವಸ್ಥೆ ಇದ್ದರು ಆರ್ಭಟಿಸುವ ಮಳೆ ಗಾಳಿಯಿಂದ ಮರಗಿಡಗಳು ರಸ್ತೆಗುರುಳಿ ನಮ್ಮನ್ನು ಮತ್ತೆ ಮತ್ತೆ ನಡೆಯುವಂತೆ ಮಾಡುತ್ತದೆ.

ಅಂತರ್ಜಾಲ ಚಿತ್ರ
ಅಪ್ಪನಲ್ಲಿ ಕಾಡಿ ಬೇಡಿ ತರಿಸಿಕೊಂಡ ಕಮಲದ ಗುರುತಿನ ಛತ್ರಿಯು ಎರಡೆ ಎರಡು ಮಳೆಗೆ ಮುರಿದು ಮನೆಯ ಅಟ್ಟ ಸೇರುತ್ತದೆ. ಛತ್ರಿ ಹಾಳು ಮಾಡಿದ್ದಕ್ಕಾಗಿ ಅಪ್ಪನಿಂದ ಪಟ್ಟುತಿಂದಿದ್ದು ಇದೆ. ವಿಪರೀತವಾದ ಗಾಳಿಯೊಂದಿಗಿನ ಮಳೆ ಇಡೀ ಸಮವಸ್ತ್ರವನ್ನೆ ಒದ್ದೆ ಮಾಡುತ್ತದೆ. ತರಗತಿಯೊಳಗೆ ಸ್ನೇಹಿತರೊಂದಿಗೆ ಅಂಟಿಕೊಂಡು ಕುಳಿತು ಚಳಿಯನ್ನು ಮರೆಯುವ ನಾವು, ಶಿಕ್ಷಕರ ಪೆಟ್ಟಿನೊಂದಿಗೆ ಮೈ ಬಿಸಿ ಮಾಡಿಕೊಳ್ಳುತ್ತೇವೆ. ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ಮನೆಯ ದಾರಿ ಹಿಡಿಯುವ ನಾವು ನದಿ ತೊರೆ ದಾಟಿ ಮಳೆಯ ಮಜಾ ಅನುಭವಿಸಿ ಅಮ್ಮ ಮಾಡಿಟ್ಟ ಅಡುಗೆಯನ್ನು ಮನದಲ್ಲಿಯೇ ನನೆದು ಮನೆ ಸೇರುತ್ತವೆ.

ಅಮ್ಮ ಮಳೆಗಾಲದಲ್ಲಿ ಮುಂಜಾನೆ ಮಾಡುವ ಬಿಸಿ ಬಿಸಿ ರೊಟ್ಟಿ ಮತ್ತು ಸಾರು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಆಡುಗೆ ಮನೆಯಲ್ಲಿ ಮಣ್ಣಿನ ಒಲೆಯ ಮುಂದೆ ಕುಳಿತು ಬೆಂಕಿಯ ಬಿಸಿಯನ್ನು ಆಸ್ವಾದಿಸುತ್ತಾ ಅಮ್ಮ ಮಾಡಿದ ಆಹಾರವನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಮಳೆಗಾಲದಲ್ಲಿ ನಮ್ ಕಡೆ ಹಲಸಿನ ಹಣ್ಣು ಹೆಚ್ಚಾಗಿ ದೊರೆಯುವ ಕಾರಣದಿಂದಲೂ ಏನೋ, ಹಲಸಿನ ಹಣ್ಣಿನ ದೋಸೆ, ಹಲಸಿನ ಕಡುಬು, ಮುಂತಾದ ಹಲಸಿನ ಪದಾರ್ಥಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇನ್ನೂ ಅಟಿ ತಿಂಗಳ 18 ರಂದು ಅಟಿ ಸೊಪ್ಪು ಎಂಬ 18 ಬಗೆಯ ಮೂಲಿಕೆ ಇರುವ ಸೊಪ್ಪಿನ ಪಾಯಸವನ್ನು ಮಾಡಲಾಗುತ್ತದೆ.

ಅಂತರ್ಜಾಲ ಚಿತ್ರ
ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವಾರು ಆಹಾರ ಪದ್ದತಿಯನ್ನು ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಗುರುತಿಸಬಹುದು. ಕೆಸದ ಎಲೆಯಿಂದ ಮಾಡುವ ಪತ್ರಡೆ ಇಲ್ಲಿನ ಚಳಿಗೆ ಉತ್ತಮ ಆಹಾರವಾಗಿದೆ. ಮಳೆಗಾಲದ ವಿಪರೀತವಾದ ಚಳಿಯನ್ನು ಮರೆಯುವ ಉದ್ದೇಶದಿಂದ ಕೊಡಗಿನ ಕೆಲವಾರು ಜನಾಂಗದವರು ಮದ್ಯಪಾನವನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಾಗಿ ಮಾಡಿಕೊಂಡಿದ್ದಾರೆ. ಮಾಂಸ ಪ್ರಿಯರಾದ ನಾವು ಅಟಿ ತಿಂಗಳಿನಲ್ಲಿ ಬೇಸಾಯದ ಕ್ಲಿಷ್ಟತೆಯನ್ನು ಮರೆಯಲು, ಮಳೆಯಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನಾಟಿ ಕೋಳಿಯ ಪದಾರ್ಥವನ್ನು, ನಾಟಿ ಔಷಧಿಗಳನ್ನು ಹೆಚ್ಚಾಗಿ ಬಳಸುವುದನ್ನು ಕಾಣಬಹುದು. ಕಾಡಿನಲ್ಲಿ ದೊರೆಯುವ ಕಾಡು ಮಾವಿನ ಹಣ್ಣಿನ ಸಾರು, ಗುಡುಗು ಸಿಡಿಲಿನ ಪ್ರಭಾವದಿಂದ ದೊರೆಯುವ ಅಣಬೆಯ ಸಾರು, 3-4 ದಿನ ನೆನೆಸಿಟ್ಟು ಮಾಡುವ ಕಣಿಲೆಯ ಸಾರು ಕೊಡಗಿನ ಮಳೆಗಾಲದ ಪ್ರಮುಖ ಆಹಾರವೆಂದರೆ ತಪ್ಪಾಗಲಾರದು.

ಮಳೆಯ ನಡುವೆ ಕಾಫಿ ತೋಟದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತಲೆಗೆ ಕಟ್ಟಿ ಕೆಲಸ ಮಾಡುವ ಕೂಲಿ ಕಾಮರ್ಿಕರ ಪರಿಸ್ಥಿತಿಯಂತು ಹೇಳ ತೀರದ್ದು. ತೋಟಗಳು ಕಡಿದಾದ ಇಳಿಜಾರು ಪ್ರದೇಶದಲ್ಲಿರುವುದರಿಂದ ತಿಗಣೆಗಳು ಮಾನವ ದೇಹದಿಂದ ರಕ್ತ ಇರುವ ಕೆಲಸವನ್ನು ಸರಾಗವಾಗಿ ಮಾಡುತ್ತದೆ. 

ಅಂತರ್ಜಾಲ ಚಿತ್ರ
ವಿದ್ಯುತ್ ಸಂಪರ್ಕ ಇರುವ ಕೆಲವಾರು ಪ್ರದೇಶಗಳಲ್ಲಿ ವಿಪರೀತ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ನೆಲಕುರುಳುವ ಮೂಲಕ  ವಾರಗಟ್ಟಲೆ ಕರೆಂಟ್ ಇಲ್ಲದೆ ಕತ್ತಲಲ್ಲಿರುವ ಪರಿಸ್ಥಿತಿಯನ್ನು ನಮ್ ಕಡೆ ಕಾಣಬಹುದು. ನದಿಯ ಹತ್ತಿರವಿರುವ ಮನೆಗಳಿಗೆ ನೀರು ನುಗ್ಗಿ ಜನರ ಬದುಕನ್ನು ಅತಂತ್ರಗೊಳಿಸುವ ಪ್ರಸಂಗ, ಕಟ್ಟಡಗಳ ಗೋಡೆ ಉರುಳಿ ಸಾವಾಗುವ ಸಂಭವವನ್ನು ಕೊಡಗಿನ ಮಳೆಯ ಸಂದರ್ಭ ಗುರುತಿಸಬಹುದು. ಒಮ್ಮೋಮ್ಮೆ ಆಧಿಕ ಮಳೆಯಾದಾಗ ಶಾಲಾ ಕಾಲೇಜಿಗೆ ರಜೆ ನೀಡಿದಾಗಲಂತು ವಿದ್ಯಾರ್ಥಿಗಳಿಗೆ ಮಜವೇ ಮಜ.

ಗ್ರಾಮೀಣ ಬದುಕಿನ ಜೀವಪರವಾದ ಜೀವನ ಶೈಲಿ ಇಂದು ಸ್ವಲ್ಪ ಸ್ವಲ್ಪವಾಗಿಯೇ ನಾಶಹೊಂದುತ್ತಿದೆ. ಅರಣ್ಯ ನಾಶದಿಂದಾಗಿ ಮಳೆಯು ಕಡಿಮೆಯಾಗಿದೆ. ಭಾವನೆಗಳನ್ನು ಮತ್ತೆ ಮತ್ತೆ ಪುಟಿಯುವಂತೆ ಮಾಡುವ ಆ ಕಾಲದ ಮಳೆಯು ಆಧುನಿಕತೆಯ ಕರಿ ನೆರಳಿನಿಂದ ಜೀವ ವಿನಾಶದತ್ತ ನಮ್ಮನ್ನ ಕೊಂಡೊಯ್ಯತ್ತಿದೆ. ಮತ್ತೆ- ಮತ್ತೆ ಕಾಡುವ ಆ ನೆನಪು ಪ್ರಕೃತಿಯ ಚಿಗುರಿನಂತೆ ಹಸನಾಗಲಿ ಎಂಬುದೇ ಎಲ್ಲರ ಆಶಯ.

ಮುಸ್ತಫ ಕೆ ಎಚ್
ದ್ವಿತೀಯ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ.

ಸೋಮವಾರ, ಏಪ್ರಿಲ್ 27, 2015

ಕನ್ನಡ ಸಾಹಿತ್ಯ ವಾಗ್ವಾದಗಳು-ಪುಸ್ತಕ ವಿಮರ್ಶೆ

ಲೇಖಕರು-ರಹಮತ್ ತರೀಕೆರೆ
ಪುಸ್ತಕದ ಬೆಲೆ-120 ರೂ
ಪ್ರಕಾಶಕರು-ಪ್ರಸಾರಾಂಗ  ಕನ್ನಡ ವಿಶ್ವವಿದ್ಯಾನಿಲಯ ಹಂಪಿ
ವರ್ಷ-2012

ಸಾಹಿತ್ಯದ ಓದು ಸಮಾಜ ಸಂಸ್ಕೃತಿಯೊಂದಿಗೆ ನಡೆಸುವ ಅನುಸಂಧಾನ. ಸಮಾಜವನ್ನು ಸಂವೇಧನಾತ್ಮಕ ನೆಲೆಯಿಂದ ಅರ್ಥಹಿಸಲು ಸಾಹಿತ್ಯದ ಅಧ್ಯಯನ ಪೂರಕವಾಗಿದೆ. ಸಾಹಿತ್ಯದ ಓದು ಸೂಕ್ಷ್ಮವಾದ ಸಂವೇಧನಶೀಲತೆಯುಳ್ಳ ಮಾನವನಾಗಿ ನಮ್ಮನ್ನ ಪರಿವರ್ತಿಸುತ್ತದೆ. ಸೃಜನಶೀಲ ಚಟುವಟಿಕೆಗಳ ಅಭಿವ್ಯಕ್ತಿಯ ನೆಲೆಯೆ ಸಾಹಿತ್ಯ.

ಓದು ವಿಮರ್ಶೆಗೆ ನಮ್ಮನ್ನು ಗುರಿಪಡಿಸುವ ಮೂಲಕ ಹೊಸ ಬಗೆಯ ಒಳವನ್ನು ನಿರೂಪಿಸುತ್ತದೆ. ಆ ಮೂಲಕ ಚದುರಿಹೋದ ಜ್ಞಾನದ ಜಿಙ್ಞಾಸೆಯನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಸಾಹಿತ್ಯದ ಭಾಷೆ ವ್ಯವಹಾರಿಕ ಭಾಷೆಯಲ್ಲ. ವಿಮರ್ಶೆಯು ಸಾಹಿತ್ಯದ ಭಾಷೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿಮರ್ಶೆ ಪಾಶ್ಚಾತ್ಯರ ಪ್ರಭಾವದಿಂದ ಹುಟ್ಟಿಕೊಂಡ ಚಿಂತನ ಮಾದರಿ. ಸಾಹಿತ್ಯಕ ಚೌಕಟ್ಟಿನಿಂದ ಪಲ್ಲಟಗೊಂಡರೆ ಸೈದಾಂತಿಕ ತರ್ಕಗಳನ್ನು ಒಡಮೂಡಿಸುವುದು ವಿಮರ್ಶೆಯ ಜಾಯಮಾನ. ಸಾರ್ವಜನಿಕ ಮತ್ತು ವೈಯಕ್ತಿಕ ಅಭಿಪ್ರಾಯಗಳ ಸಂಯೋಜನೆಯ ಮೂಲಕ ಕರ್ತುವಿನ ಬರಹಗಳಿಗೆ ಪರ-ವಿರುದ್ಧ, ದಾಳಿ-ಪ್ರತಿದಾಳಿಗಳು ವಿಮರ್ಶಾ ಚೌಕಟ್ಟಿನ ಮೂಲಕ ಅಭಿವ್ಯಕ್ತವಾಗುತ್ತದೆ. ಅದು ಒಂದು ರೀತಿಯಲ್ಲಿ ಕೃತಿಯ ಮೌಲ್ಯವನ್ನು, ಲೇಖಕನ ವರ್ಚಸನ್ನು ಹೆಚ್ಚಿಸಲೂಬಹುದು, ಕುಂದಿಸಲೂಬಹುದು.

ರಹಮತ್ ತರೀಕೆರೆ
ವಿಮರ್ಶೆಯ ಚೌಕಟ್ಟಿನಿಂದ ಹೊರಗುಳಿಯುವ ಮೂಲಕ ವಿರೋಧಾಭಾಸದ ನೆಲೆಯಲ್ಲಿ ಕೃತಿಯೊಂದು ಚರ್ಚಿತವಾಗಿ, ಹೊಸದೊಂದು ವಾಗ್ವಾದಕ್ಕೆ ಕೃತಿ ಮತ್ತು ಲೇಖಕ ಗುರಿಯಾಗುವುದು ಸಹಜ. ಇದನ್ನು ವಿವಾದಾತ್ಮಕ ವಿಚಾರಧಾರೆಯ     ವಿಮರ್ಶಯ ಸ್ಥರವೆಂದು, ಸಾಹಿತ್ಯಕ ವಾಗ್ವಾದವೆಂದು ಕರೆಯಬಹುದು.

ಡಾ. ರಹಮತ್ ತರೀಕೆರೆಯವರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಯೋಜನೆಯ ಮೂಲಕ, 'ಕನ್ನಡ ಸಾಹಿತ್ಯ ವಾಗ್ವಾದಗಳು' ಎಂಬ ಪುಸ್ತಕವನ್ನು 2012ರಲ್ಲಿ ಬರೆದು ಪ್ರಕಟಿಸಿದರು.  20ನೇ ಶತಮಾನದಿಂದಿಚೆಗೆ ಕನ್ನಡ ಸಾಹಿತ್ಯದಲ್ಲಿ ನಡೆದ ಪ್ರಮುಖ ವಾಗ್ವಾದಗಳನ್ನು ಈ ಕೃತಿ ಕುಲಂಕುಶವಾಗಿ ಚರ್ಚಿಸುತ್ತದೆ. ಆರೋಗ್ಯಕರ ನಾಗರಿಕ ಸಮಾಜ ಕಟ್ಟಲು ಜರೂರಾಗಿ ಅಗತ್ಯವಿರುವುದು ಗಲಭೆಗಳಲ್ಲ, ಸಾಹಿತ್ಯಕ ವಾಗ್ವಾದಗಳು. ಅವುಗಳು ಸಮುದ್ರ ಮಥನವಿದ್ದಂತೆ. ಅಲ್ಲಿ ಹಾಲಾಹಲವು ಅಮೃತವೂ ಒಟ್ಟಿಗೆ ಹುಟ್ಟಿ ಬರುತ್ತವೆ. ಕೆಲವೊಮ್ಮೆ ಬರೀ ಉಪ್ಪು ನೀರು ಮೇಲೇಳುವುದೂ ಉಂಟು ಎಂಬ ಲೇಖಕರ ಪೀಠಿಕೆಯ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ.

ಕೃತಿಯ ಆರಂಭವನ್ನು ಲೇಖಕರ ಅಭಿಪ್ರಾಯ ಮಂಡನೆಯ ಮೂಲಕ ಗುರುತಿಸಬಹುದು. ಕನ್ನಡ ಸಾಹಿತ್ಯ ಚರಿತ್ರೆಯ ಒಟ್ಟು ವಾಗ್ವಾದಗಳನ್ನು ಎತ್ತಿಕೊಳ್ಳದೆ, ಸೂಕ್ಷ್ಮ ರೀತಿಯಲ್ಲಿ ಹೆಚ್ಚು ಪ್ರಚುರವು, ಅರ್ಥಪೂರ್ಣವು ಅದಂತಹ ಕೆಲವಾರು ವಾಗ್ವಾದಗಳನ್ನು ಈ ಕೃತಿ ಕೈಗೆ ಎತ್ತಿಕೊಂಡಿದೆ. ಬಿಎಂಶ್ರಿ, ಬೇಂದ್ರೆ, ಶಂಬಾ, ಮಾಸ್ತಿ, ತಿರುಮಲಾಂಬ, ಡಿವಿಜಿ, ಕುವೆಂಪು, ತೀನಂಶ್ರಿ, ದೇವುಡು, ರಾಜರತ್ನಂ, ಅನಕೃ, ನಿರಂಜನ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕೆ. ವಿ. ಸುಬ್ಬಣ್ಣ, ಚಂದ್ರಶೇಖರ ಕಂಬಾರ, ಎಂ.ಎಂ.ಕಲಬುರ್ಗಿ, ಕಿರ್ತಿನಾಥ ಕುರ್ತುಕೋಟಿಯಂತಹ ಸಾಹಿತಿಗಳು ಕನ್ನಡ ಸಾಹಿತ್ಯದ ಪ್ರಮುಖ ವಾಗ್ವಾದಗಳಲ್ಲಿ ಭಾಗವಹಿಸಿ ತಮ್ಮ ಸೈದಾಂತಿಕ ಅಭಿವ್ಯಕ್ತಿಯ ನೆಲೆಗಟ್ಟುಗಳನ್ನು, ತಾತ್ವಿಕ ಸಂಘರ್ಷಗಳನ್ನು ಅತ್ಯಂತ ಪ್ರಬುದ್ಧವಾಗಿ ನಿರ್ವಚಿಸಿದರು.
ವಿಪರ್ಯಾಸವೆಂದರೆ ಸಾಹಿತ್ಯ ಚಿಂತನಾ ಮಾದರಿಯ ವಾಗ್ವಾದಗಳು ನಡೆದರು ಅವುಗಳ ಹಿಂದೆ, ಕರ್ತುವಿನ ಸಾಮಾಜಿಕ, ರಾಜಕೀಯ ತಾತ್ವಿಕತೆಯೇ ಮುಖ್ಯ ಭೂಮಿಕೆಯಾಗಿಯೇ ನಿರೂಪಿತವಾಯಿತು. ಪಂಥಿಯ ಚಿಂತನೆಗಳಂತು ಪ್ರಬಲವಾಗಿ ಒಡಮೂಡುವ ಮೂಲಕ ಸಾಮಾಜಿಕ ಐಡೆಂಟಿಟಿಗಾಗಿ ವಾಗ್ವಾದಗಳು ಗಟ್ಟಿಯಾಗಿಂಯೇ ದ್ವನಿಯನ್ನು ಮೂಳಗಿಸಿತು. ಆದರೆ ಡಾ. ರಹಮತ್ ತರೀಕೆರೆಯವರು ಈ ಮಾದರಿಯ ಅಭಿಪ್ರಾಯಗಳನ್ನು, ವಾಗ್ವಾದಗಳನ್ನು ತಮ್ಮ ಕೃತಿಯಲ್ಲಿ ಅತ್ಯಂತ ಸೂಕ್ಷ್ಮವಾಗಿ, ಯಾರಿಗೂ ಗಾಸಿಯಾಗದಂತೆ ನಿರ್ವಹಿಸಿರುವುದು ಸಾಹಿತ್ಯಕ ಬೆಳವಣಿಗೆಯ ದೃಷ್ಟಿಯಿಂದ ಸಮಂಜಸವಾಗಿದೆ.
ಇನ್ನೂ ಸಾಹಿತಿಗಳಲ್ಲದ ಎಂ.ಡಿ ನಂಜುಂಡಸ್ವಾಮಿ, ಶಾಂತವೇರಿ ಗೋಪಾಲ ಗೌಡ, ಬಸವಲಿಂಗಪ್ಪ, ಬಿ.ಕೃಷ್ಣಪ್ಪನವರು ಸಾಹಿತ್ಯಕ ವಾಗ್ವಾದಲ್ಲಿ ಭಾಗವಹಿಸಿರುವುದರ ಮೂಲಕ, ಹೊಸ ಬಗೆಯ ರಾಜಕೀಯ, ಸಾಮಾಜಿಕ ಕ್ರಾಂತಿಯ ಕಿಡಿಗಳಾಗಿ ಒಡಮೂಡಿದರು.

ಈ ಕೃತಿಯಲ್ಲಿ ನಾವೆಲು (1917), ರುದ್ರನಾಟಕ (1941), ಶೂದ್ರ ತಪಸ್ವಿ (1944), ಅಶ್ಲೀಲ ಸಾಹಿತ್ಯ (1952), ಚೆನ್ನಬಸವ ನಾಯಕ (1956), ದಲಿತ ದೃಷ್ಟಿಕೋನ (1980), ಬೂಸಾ ಸಾಹಿತ್ಯ (1973), ಕರ್ನಾಟಕ ಸಂಸ್ಕೃತಿ (1978), 'ಶ್ರೇಷ್ಠತೆ'ಯ ವಾಗ್ವಾದ (1990), ಸಂಗ್ಯಾ ಬಾಳ್ಯಾ (2005) ಹೀಗೆ ಹತ್ತು ಹಲವು ವಾಗ್ವಾದಗಳ ಕುರಿತು ವಿಶ್ಲೇಷಾತ್ಮಕವಾಗಿ ಚರ್ಚಿ ಸಲಾಗಿದೆ.

ಮೇಲೆ ವಿವರಿಸಲಾದ ವಾಗ್ವಾದದ ಪ್ರಕರಣಗಳನ್ನು ನಾಲ್ಕು ಭಾಗಗಳಾಗಿ ಲೇಖಕರು ವಿಭಾಗಿಸಿಕೊಂಡಿದ್ದು, ಮೊದಲನೇ ಭಾಗದಲ್ಲಿ ಪ್ರಕರಣಕ್ಕೆ ಕಾರಣವಾದ ಪೂರ್ವ ಪೀಠಿಕೆಯ ವಿಚಾರಧಾರೆಗಳನ್ನೂ, ಎರಡನೇ ಭಾಗದಲ್ಲಿ ವಾಗ್ವದಕ್ಕೆ ಕಾರಣವಾದ ಸಾಂಸ್ಥಿಕ ಚಿಂತನೆಗಳ ವಾದಮಂಡನೆಯನ್ನೂ ಒಳಗೊಂಡಿದೆ. ಮೂರನೇ ಭಾಗದಲ್ಲಿವ ವಾದ ಮಂಡನೆಗೆ ಪರ, ವಿರೋಧವಾಗಿ ಬಂದ ಪ್ರತಿಕ್ರಿಯೆಗಳನ್ನೂ, ಅಭಿಪ್ರಾಯಗಳನ್ನು ನಿರೂಪಿಸಲಾಗಿದೆ. ನಾಲ್ಕನೆಯ ಘಟದಲ್ಲಿ ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಪ್ರಶ್ನೆಗಳ ವಿಶ್ಲೇಷಣಾತ್ಮಕ ಚಚರ್ೆಗಳಿದೆ. ಕೊನೆಯಲ್ಲಿ ವಾಗ್ವಾದಕ್ಕೆ ಪೂರಕವಾದ ಟಿಪ್ಪಣಿ, ಪರಾಮರ್ಶನ ಗ್ರಂಥ ಹಾಗೂ ಇನ್ನಿತರ ಆಕರಗಳ ಮಾಹಿತಿಯನ್ನು ಒದಗಿಸಲಾಗಿದೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್
ನಾವೆಲು ವಾಗ್ವಾದವು ಕನ್ನಡದ ಖ್ಯಾತ ಸಾಹಿತಿ, ಸಣ್ಣ ಕಥೆಯ ಜನಕ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ವಿದ್ಯುಲ್ಲತಾ ಕಾದಂಬರಿ ರಚಿಸಿದ ನಂಜನಗೂಡಿನ ತಿರುಮಲಾಂಬ ಅವರ ನಡುವೆ ನಡೆಯಿತು. 1917ರಲ್ಲಿ ಕೃಷ್ಣ ಸೂಕ್ತಿ ಎಂಬ ಪತ್ರಿಕೆಯಲ್ಲಿ ತಿರುಮಲಾಂಬರ ವಿದ್ಯುಲತಾ ಕಾದಂಬರಿಗೆ ತೀಕ್ಷ್ಣವಾದ ವಿಮರ್ಶೆ ಬರೆಯುವ ಮೂಲಕ ವಾಗ್ವದಕ್ಕೆ ಚಾಲನೆ ದೊರೆಯಿತು. ಈ ಕುರಿತು ರಹಮತ್ ತರಿಕೇಕೆಯವರ ಈ ಕೃತಿಯು ವ್ಯಾಪಕವಾಗಿ ಚರ್ಚಿಸಲಾಗಿದೆ.
ರುದ್ರನಾಟಕ ವಾಗ್ವಾದವು 1941ರಲ್ಲಿ ಬಿ.ಎಂ.ಶ್ರೀ.ರವರ ಅಶ್ವತ್ಥಾಮನ್ ನಾಟಕ ಪ್ರಕಟಗೊಳ್ಳುವ ಮೂಲಕ ಪ್ರಾರಂಭವಾಗುತ್ತದೆ. ಪಾಶ್ಚಾತ್ಯ ಟ್ರಾಜಿಡಿ ಪರಿಕಲ್ಪನೆಯನ್ನು ಭಾರತೀಯ ಪುರಾಣಗಳ ಮೇಲೆ ಅನ್ವಯಿಸುವ ಮೂಲಕ ನಾಟಕವನ್ನು ಶ್ರೀ ರಚಿಸಿದ್ದು, ಪರ ವಿರೋಧ ಚರ್ಚೆಗಳು ನಡೆಯಲು ಕಾರಣವಾಯಿತು. ಅಶ್ವತ್ಥಾಮನ್ ನಾಟಕದಲ್ಲಿ ನಾಯಕ ದುರಂತೆಯ ಮೂಲಕ ಅಂತ್ಯ  ಕಾಣುವುದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು. ಕಾರಣ ನಾಯಕ ಅಶ್ವತ್ಥಾಮ ಚಿರಂಜೀವಿ ಎಂಬ ಪರಿಕಲ್ಪನೆಯನ್ನು ಭಾರತೀಯ ಪುರಾಣಗಳು ಕಟ್ಟಿಕೊಟ್ಟಿದ್ದವು. ಅಂತಹ ಸಾಂಸ್ಕೃತಿಕ ವಿಚಾರಧಾರೆಯನ್ನು ಪಲ್ಲಟಗೊಳಿಸುವ ಕೆಲಸವನ್ನು ಬಿಎಂಶ್ರೀ ಅವರು ಮಾಡಿದರು. ಇದು ಅಂದಿನ ಕಾಲಕ್ಕೆ ಮಹತ್ವ ಸಂಗತಿಯಾಯಿತು.

ಕುವೆಂಪು
ರಾಮಾಯಣದ ಉತ್ತರಕಾಂಡದಲ್ಲಿ ಒಡಮೂಡಿದ ಪ್ರಕ್ಪಿಪ್ತ ಕಥೆಯನ್ನು ಕುವೆಂಪು ಅವರು ಬದಲಾಯಿಸಿ, ರಾಮನ ವ್ಯಕ್ತಿತ್ವವನ್ನು ಉದಾತ್ತವಾಗಿ ಚಿತ್ರಿಸಿ, ಶೂದ್ರ ಶಂಬುಕನಿಗೂ ತಪಸ್ಸು ಮಾಡಲು ಅವಕಾಶ ಕಲ್ಪಸಿ,ಜಾತಿ ಗರ್ವಾಂಧರಿಗೆ ಪಾಠ ಕಲಿಸಲು ರಚಿತವಾದ ನಾಟಕವೇ ಶೂದ್ರ ತಪಸ್ವಿ. ಈ ನಾಟಕಕ್ಕೆ ಸಂಪ್ರದಾಯವಾದಿ ಬಲಪಂಥಿಯರಿಂದ ತೀವ್ರವಾದ ಅಕ್ಷೇಪವು ವ್ಯಕ್ತವಾಯಿತು. ಮಾಸ್ತಿ ಎಂದಿನಂತೆ ತಮ್ಮ ಟೀಕಾಸ್ತ್ರವನ್ನು ಕುವೆಂಪುರವರ ಶೂದ್ರತಪಸ್ವಿಯ ಮೇಲೆ ತೀಕ್ಷ್ಣವಾಗಿಯೇ ಪ್ರಯೋಗಿಸುವ ಮೂಲಕ ಶೂದ್ರ ತಪಸ್ವಿ ವಾಗ್ವಾದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಗೊಳ್ಳುವಂತೆ ಮಾಡಿದರು.

ಪ್ರಗತಿಶೀಲ ಪಂಥದ ಪ್ರಮುಖ ಲೇಖರರಾದ ಅ. ನ. ಕೃಷ್ಣರಾಯರು ರಚಿಸಿದ ನಗ್ನ ಸತ್ಯ (1950) ಹಾಗೂ ಶನಿಸಂತಾನ (1951), ಕಾದಂಬರಿಗಳು ಟೀಕಾಕಾರರ ಟೀಕೆಗೆ ಗುರಿಯಾಯಿತು. ಈ ಕೃತಿಗಳು ಸಹೃದಯರಲ್ಲಿ ಕೀಳು ಅಭಿರುಚಿಯ ಆಶ್ಲೀಲತೆಯನ್ನು ಪ್ರಚುರಪಡಿಸುತ್ತಿದೆ ಎಂದು ಕಲವು ಲೇಖಕರು ದೂರಿದರು. ಆ ಮೂಲಕ ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಗಳು ನಗ್ನ ಸತ್ಯ ಕೃತಿಯ ಕರ್ತುವನ್ನು ತೆಗಳುವ ದೈನಂದಿನ ಕಾಯಕವನ್ನು ಮಾಡಿತು.
1949ರಲ್ಲಿ ಹೊರಬಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚೆನ್ನಬಸವ ನಾಯಕ ಕಾದಂಬರಿಯು ಪ್ರಕಟವಾದಗ ಯಾವುದೇ ವಾಗ್ವಾದಕ್ಕೆ ಗುರಿಯಾಗಲಿಲ್ಲ. ಕೇಂದ್ರ ಸಾಹಿತ್ಯ ಆಕಾಡೆಮಿಯು 1956ರಲ್ಲಿ ಬೇರೆ ಬೇರೆ ಭಾಷೆಗಳಿಗೆ ಈ ಕಾದಂಬರಿಯನ್ನು ಅನುವಾದಿಸಲೆತ್ನಿಸಿದಾಗ ಸಮಸ್ಯೆಗಳು ಬುಗಿಲೇಳಲು ಶುರುವಾಯಿತು. ಕೆಳದಿ ರಾಜಮನೆತನದ ರಾಣಿ ವೀರಮ್ಮಾಜಿಯವರ ಚಾರಿತ್ರವಧಾ ಮಾಡಲಾಗಿದೆ ;ಎಂಬ ದ್ವನಿ ಲಿಂಗಾಯುತ ಸಮುದಾಗಳಲ್ಲಿ ಮೊಳಗಿತು. ಕೊನೆಗೆ ಲಿಂಗಾಯುತ ಮತ್ತು ಬ್ರಾಹ್ಮಣ ನಡುವೆ ಸಾಹಿತ್ಯಕ ವೈರುಧ್ಯಗಳು ನಿರೂಪಿತಗೊಂಡು, ಸಂಸತ್ನಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಅನುವಾದ ಕಾರ್ಯವನ್ನು ಅಕಾಡೆಮಿ ಸ್ಥಗಿತಗೊಳಿಸುವಂತೆ ತಿರ್ಮಾನಿಸಿತು.

ಪೂರ್ಣ ಚಂದ್ರ ತೇಜಸ್ವಿ
ಇನ್ನೂ ದಲಿತ ವಾಗ್ವಾದ ಮತ್ತು ಬೂಸಾ ಪ್ರಕರಣಗಳು ಕರ್ನಾಟಕದಲ್ಲಿ ದಲಿತ ಸಾಹಿತ್ಯದ ಬೆಳವಣಿಗೆಗೆ ಮಹತ್ವವಾದ ಕಾರಣವಾಯಿತು. ಸಾಹಿತಿಗಳಲ್ಲದ ಬಿ.ಕೃಷ್ಣಪ್ಪ ಹಾಗೂ ಮಂತ್ರಿ ಬಸವಲಿಂಗಪ್ಪನವರು ಈ ವಾಗ್ವಾದಗಳನ್ನು ಹುಟ್ಟುಹಾಕಿದರು. ಆ ಮೂಲಕ ಸಿದ್ದಲಿಂಗಯ್ಯ, ಡಿ.ಆರ್. ನಾಗರಾಜ್, ಶೂದ್ರ ಶೀನಿವಾಸ್ರಮತಹ ದಲಿತ ಸಂವೇಧನೆಯ ಲೇಖಕರು ಸೃಷ್ಟಿಯಾದರು.

ಡಾ. ಯು.ಆರ್. ಅನಂತಮೂರ್ತಿ ನವ್ಯದ ಶ್ರೇಷ್ಟತೆಯನ್ನು ಪ್ರತಿಪಾದಿಸುವ ದೃಷ್ಟಿಯಿಂದ 1978ರಲ್ಲಿ ಕುವೆಂಪು ಕಾದಂಬರಿಗಳಲ್ಲಿ ಸಂಸ್ಕೃತಿಯ ಎಂಬ ವಿಚಾರದ ಬಗ್ಗೆ ವಾಗ್ವಾದ ಪ್ರಾರಂಭಿಸಿದರು, ಭಾರತೀಯ ಸಂಸ್ಕೃತಿಯಲ್ಲಿ ಹೆಸರಲ್ಲಿ ಮಾಡಿದ ಈ ವಿಶ್ಲೇಷಣೆಗೆ, ಕುವೆಂಪು ಅವರ ಪುತ್ರ ತೇಜಸ್ವಿಯವರು ಕರ್ನಾಟಕ ಸಂಸ್ಕೃತಿಯ ಚಿಂತನಾ ಮಾದರಿಯಲ್ಲಿ ಉತ್ತರಿಸಿದರು. ಇದನ್ನು ಶೂದ್ರ ಬ್ರಾಹ್ಮಣ ಪ್ರಜ್ಞೆಯ ವಾಗ್ವಾದವೆಂದು ಕರೆಯುತ್ತಾರೆ.


ಯು.ಆರ್ ಅನಂತಮೂರ್ತಿ
ಮುಂದೆ ನವ್ಯರ ಶ್ರೇಷ್ಠತೆಯ ವಾಗ್ವಾದ, ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯಾ ವಾಗ್ವಾದಗಳನ್ನು ರಹಮತ್ ತರೀಕೆರೆಯವರ ಕನ್ನಡ ಸಾಹಿತ್ಯ ವಾಗ್ವಾದಗಳು ಕೃತಿಯು ಕಟ್ಟಿಕೊಡುತ್ತದೆ. ಲೇಖಕರ ವಿಸ್ತೃತ ಜ್ಞಾನ, ನೂರಾರು ಪುಸ್ತಕಗಳ ವಿಚಾರಗಳನ್ನು ಪರಾಮರ್ಶಿಸಿ, ಅಭಿವ್ಯಕ್ತಿಸಿದ ವಿಚಾರಧಾರೆ, ಯಾವುದೇ ಪಂಥವನ್ನು ಬೆಂಬಲಿಸದ, ರಕ್ಷಿಸದ ಲೇಖಕರ ಮನಸ್ಥಿತಿ, ಈ ಒಂದು ಕೃತಿಯನ್ನು ಸಂಶೋಧನಾತ್ಮಕವಾಗಿ ಗಟ್ಟಿಗೊಳಿಸಿದೆ.

ಒಟ್ಟಿನಲ್ಲಿ ಕನ್ನಡ ಮನಸ್ಸುಗಳು ನಡೆಸಿದ ಈ ವಾಗ್ವಾದಗಳಲ್ಲಿ ಮೇಲುನೋಟಕ್ಕೆ ಸಾಹಿತ್ಯ ವಾಗ್ವಾದಗಳಾದರೂ, ಅಂತರ್ಯದಲ್ಲಿ ಕನ್ನಡ ಸಮಾಜದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಆಯಾಮಗಳನ್ನು ತನ್ನೊಳಗೆ ಬಚ್ಚಿಟ್ಟಿದೆ. ಸಾಂಸ್ಕೃತಿಕ ರಾಜಕೀಯ ಪ್ರಜ್ಞೆ, ಧಾರ್ಮಿಕ ಪಂಥಿಯ ಪ್ರಜ್ಞೆಗಳು ಕನ್ನಡದ ಪ್ರಮುಖ ಲೇಖಕರನ್ನು ಬಿಟ್ಟಿಲ್ಲವೆಂಬುವುದು ಒಂದು ರೀತಿಯಲ್ಲಿ ವಿಪರ್ಯಾಸವೇ ಸರಿ.

ಸಾಹಿತ್ಯ ಪ್ರವೇಶಿಸುವ ಯುವ ಕನ್ನಡ ಮನಸ್ಸುಗಳಿಗೆ ಈ ಕೃತಿಯು ಮಹತ್ವಪೂರ್ಣವಾದ ಚಾರಿತ್ರಿಕ ಅಂಶಗಳನ್ನು ಒದಗಿಸುವುದರಲ್ಲಿ ಸಂಶಯವಿಲ್ಲ.

ಮುಸ್ತಫ ಕೆ ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ.


 


ಶುಕ್ರವಾರ, ಏಪ್ರಿಲ್ 24, 2015

ಸಿರಿಸಂಪಿಗೆ ನಾಟಕದಲ್ಲಿ ಸಾಕ್ಷಾತ್ಕಾರಗೊಂಡ ದೇಶಿಯ ರಂಗಭೂಮಿ ಪ್ರಜ್ಞೆ
 


ಸಿರಿಸಂಪಿಗೆ ನಾಟಕದ ಮುಖಪುಟ
  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಚಂದ್ರಶೇಖರ್ ಕಂಬಾರರ ಸಿರಿಸಂಪಿಗೆ ನಾಟಕವು ದೇಶಿಯ ರಂಗಭೂಮಿಯ ಸಾಧ್ಯತೆಗಳನ್ನು ಪ್ರಬಲವಾಗಿ ಚರ್ಚಿಸುತ್ತದೆ. ಯಕ್ಷಗಾನದ ತಂತ್ರದ ಮೂಲಕ ಸಾಕ್ಷಾತ್ಕಾರಗೊಳ್ಳುವ ನಾಟಕದ ವಸ್ತು ಜನಪದ ಕಥೆಯನ್ನೆ ಆಧರಿಸಿದೆ. ರೂಪಕ ಪ್ರಧಾನವಾದ, ಪ್ರತಿಮಾ ವಿಧಾನದಿಂದ ಸಿರಿಸಂಪಿಗೆ ನಾಟಕವು ಪಾಶ್ಚಾತ್ಯ ರಂಗಕೃತಿಗಿಂತ ಭಿನ್ನವಾಗಿದೆ. ಕನ್ನಡ ನಾಟಕಗಳಲ್ಲಿ ದೇಶಿಯತೆಯನ್ನು ಕಟ್ಟಬೇಕು, ಅದಕ್ಕಾಗಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾದ ಯಕ್ಷಗಾನದಂತಹ ಪ್ರಬಲ ಜನಪದ ಮಾಧ್ಯಮವನ್ನು ಬಳಸಿಕೊಳ್ಳಬೇಕೆಂಬುದು ಕಂಬಾರರ ಅಭಿಪ್ರಾಯ.
 
  ವಿಮರ್ಶಕ ಟಿ.ಪಿ ಅಶೋಕ್ ರವರ ಪ್ರಕಾರ ಸಿರಿಸಂಪಿಗೆ ಸಕಲ ಬಂಧದ ಸಂಕೀರ್ಣವಾದ ನಾಟಕ. ನಾಟಕದ ನಾಯಕ ಶಿವನಾಗದೇವ ಕನಸಿನಲ್ಲಿ ಕಂಡ ಕನ್ಯೆಯು ತನ್ನಲ್ಲಿ ಐಕ್ಯಗೊಂಡಿದ್ದಾಳೆ, ಆದರಿಂದ ಆಕೆಯನ್ನು ವಿವಾಹವಾಗಲು ತನ್ನ ದೇಹವನ್ನು ಎರಡಾಗಿ ಸೀಳಿಕೋಳ್ಳುತ್ತಾನೆ. ಹುಣ್ಣಿಮೆಯ ದಿನ ಸೀಳಿಕೊಂಡ ದೇಹ, ತುಂಬಿಟ್ಟ ಮಡಿಕೆಯೊಂದರಿಂದ ಕಾಳಿಂಗನೆಂಬ ಸರ್ಪವು, ಮತ್ತೊಂದರಿಂದ ಶಿವನಾಗದೇವನು ಹೊರಬರುತ್ತಾನೆ. ಆ ಮೂಲಕ ದೇಹ ಮತ್ತು ಮನಸ್ಸು ಪ್ರತ್ಯೇಕಗೊಳ್ಳುತ್ತದೆ. ತಾನು ಪ್ರೀತಿಸಿದ ಕನಸಿನ ಕನ್ಯೆಯನ್ನು ಶಿವನಾಗದೇವ ಮತ್ತೆ ಮತ್ತೆ ಹುಡುಕಾಡಲು ಪ್ರಯತ್ನಿಸುತ್ತಾನೆ. ಸೀಳಿಕೊಳ್ಳುವ ಮೂಲಕ ಜೀವಸತ್ವದ ಚೈತನ್ಯದಿಂದ ವಂಚಿತನಾಗುತ್ತಾನೆ.

  ತಾಯಿಯ ಅಣತಿಯಂತೆ ಇಷ್ಟವಿಲ್ಲದಿದ್ದರು ಸಿರಿಸಂಪಿಗೆ ಎಂಬ ಚೆಂದುಳ್ಳಿ ಚೆಲುವೆಯನ್ನು ವಿವಾಹವಾಗಿ, ಮುಂದೆ ಸಂಭವಿಸುವ ದುರಂತಗಳಿಗೆ ಕಾರಣನಾಗುತ್ತಾನೆ. ಶಿವನಾಗ ದೇವ ಸಿರಿಸಂಪಿಗೆಗೆ ನೀಡದಿರುವ ಸಾಂಸಾರಿಕ ಸುಖವನ್ನು, ತಾಯ್ತನವನ್ನು, ಪ್ರೀತಿಯನ್ನು ಶಿವನಾಗದೇವನಿಂದ ಛಿದ್ರಗೊಂಡ ಕಾಮಸ್ವರೂಪಿಯಾದ ಕಾಳಿಂಗ ಸರ್ಪವು ನೀಡುವ ಮೂಲಕ ನಾಟಕ ಹೊಸದೊಂದು ತಿರುವನ್ನು ಪಡೆದುಕೊಳ್ಳುತ್ತದೆ. ಮನುಷ್ಯನ ಅಸ್ಥಿತ್ವದ ಬಗ್ಗೆ ಇಡೀ ನಾಟಕ ಪ್ರಶ್ನಿಸುತ್ತದೆ.
 
  ಎ.ಕೆ.ರಾಮಾನುಜನ್ ಅವರು ಹೇಳಿದ ಜನಪದ ಕಥೆಯೊಂದರ ಸಣ್ಣ ಎಳೆಯನ್ನಿಟ್ಟುಕೊಂಡು, ಚಂದ್ರಶೇಖರ ಕಂಬಾರರು ಸಿರಿ ಸಂಪಿಗೆಯನ್ನು, ಗಿರೀಶ್ ಕಾರ್ನಾಡರು ನಾಗಮಂಡಲ ನಾಟಕವನ್ನು ರಚಿಸಿದರು. ಎರಡು ನಾಟಕಗಳ ವಸ್ತು ವಿಷಯ ಒಂದೇ. ಆದರೂ ನಿರೂಪಣಾ ಶೈಲಿ, ತಂತ್ರ ಧೋರಣೆ ಭಿನ್ನವಾಗಿರುವುದನ್ನು ಕಂಡುಕೊಳ್ಳಬಹುದು.
 
  ಕಂಬಾರರ ಸಿರಿಸಂಪಿಗೆ ನಾಟಕದ ಜೀವಪರತೆ ಇರುವುದು ದೇಶಿಯತೆಯ ನೆಲೆಯಲ್ಲಿ. ಯಕ್ಷಗಾನದ ಭಾಗವತಿಕೆ ಹಾಗೂ ಮೇಳದವರ ಮಾದರಿಯಲ್ಲಿ ಸಿರಿಸಂಪಿಗೆ ನಾಟಕ ಅಭಿವ್ಯಕ್ತಗೊಂಡಿದೆ. ಭಾಗವತನನ್ನು ಭಗವಂತನ ಪ್ರತಿನಿಧಿ ಎಂದು ಕರೆಯುತ್ತಾರೆ. ಇಂತಹ ಭಾಗವತ ಸಿರಿಸಂಪಿಗೆ ನಾಟಕದಲ್ಲಿ ನಿರೂಪಕನಾಗಿ, ಪಾತ್ರಧಾರಿಯಾಗಿ, ಸಲಹೆಗಾರನಾಗಿ, ವಿಮರ್ಶಕನಾಗಿ ತನಗೆ ವಹಿಸಿದ, ನಾಟಕ ರಂಗದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದನ್ನು ಗುರುತಿಸಬಹುದಾಗಿದೆ.
 
ಚಂದ್ರಶೇಖರ ಕಂಬಾರ
  ಭಾಗವತ ಒಂದು ರೀತಿಯಲ್ಲಿ ಯಕ್ಷಗಾನದ ನಿರ್ದೇಶಕ. ನಾಟಕದ ಪಾತ್ರಧಾರಿಗಳು ತಮ್ಮ ಕಷ್ಟ ಸುಖಗಳನ್ನು ದೈವ ಸ್ವರೂಪಿಯಾದ ಭಾಗವತನಲ್ಲಿ ಅಭಿವ್ಯಕ್ತಿಸುತ್ತಾರೆ. ವಿಕ್ಷಕ ವೃಂದದಲ್ಲಿಯು, ಸಹೃದಯನಲ್ಲಿಯು ನಾಟಕದ ಕುರಿತಾಗಿ ಒಡಮೂಡುವ ಸಂಶಯಗಳನ್ನು, ಗೊಂದಲಗಳನ್ನು ಭಾಗವತ ಪರಿಹರಿಸುತ್ತಾನೆ.
 
  ಯಕ್ಷಗಾನದ ಕ್ರಮದಂತೆ ಆರಂಭದಲ್ಲಿ ನಿರ್ವಿಘ್ನವಾಗಿ ನಾಟಕದ ರಂಗಪ್ರಯೋಗಗೊಳ್ಳಲು ಪ್ರಾರ್ಥನೆಯನ್ನು ಭಾಗವತನೆ ಹಾಡುತ್ತಾನೆ. ಯಕ್ಷಗಾನದ ಒಡ್ಡೊಲಗದ ಪರಿಕಲ್ಪನೆಯ ಮೂಲಕ ಪಾತ್ರಧಾರಿಗಳ ಪ್ರವೇಶವಾಗುತ್ತದೆ. ಗಂಭೀರ ಪಾತ್ರಗಳನ್ನು ಪ್ರಬುದ್ಧವಾಗಿ ಕಟ್ಟಿಕೊಡುವುದರೊಂದಿಗೆ, ನವಿರಾದ ಹಾಸ್ಯಪಾತ್ರಕ್ಕೂ ನಾಟಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಸ್ಯವನ್ನು ಅಭಿವ್ಯಕ್ತಿಸುವ ಮೂಲಕ, ಶಿವನಾಗದೇವ ಮತ್ತು ಕಾಳಿಂಗರ ವ್ಯಕ್ತಿತ್ವದ ಭಿನ್ನ ಅಯಾಮಗಳಾಗಿ, ಕಮಲಳಿಗಾಗಿ ಕಾದಾಡುವ ಅವಳಿ-ಜವಳಿ ಎಂಬ ಎರಡು ಪಾತ್ರಗಳನ್ನು ನಾಟಕದಲ್ಲಿ ಚಿತ್ರಿಸಲಾಗಿದೆ. ಯಕ್ಷಗಾನದಲ್ಲಿ ಹಾಸ್ಯ, ಗಂಭೀರ ದುರಂತದ ಚಹರೆಯನ್ನು ನಿರ್ಲಿಪ್ತ ಕೆಲವನ್ನು ನಿರ್ವಹಿಸುತ್ತದೆ. ಅದೇ ರೀತಿಯ ಕೆಲಸವನ್ನು ಸಿರಿಸಂಪಿಗೆ ನಾಟಕದ ಅವಳಿ ಜವಳಿ ನಿರ್ವಹಿಸಿದರು, ಕೊನೆಗೆ ಅವರು ಸಹ ಹೆಣ್ಣಿಗಾಗಿ ದುರಂತದ ರಹದಾರಿಯನ್ನು ತುಳಿಯುತ್ತಾರೆ.
 
  ಪ್ರತಿಯೊಂದು ದೃಶ್ಯದ ಆರಂಭದಲ್ಲಿ ಭಾಗವತರ ಹಾಡುಗಾರಿಕೆಯನ್ನು ಕಾಣಬಹುದು. ಇಡೀ ದೃಶ್ಯದ ತಾತ್ವಿಕ ನಿಲುವನ್ನು ಈ ಹಾಡುಗಳು ಅಭಿವ್ಯಕ್ತಿಸುತ್ತದೆ. ಪ್ರತಿಯೊಂದು ಹಾಡಿನಲ್ಲಿ ಮಧ್ಯಮಾವತಿ, ಕೇಂದಾರ ಗೌಳ, ಮೋಹನ ಕಲ್ಯಾಣದಂತಹ ಹಲವಾರು ರಾಗಗಳನ್ನು, ಏಕತಾಳ, ಅಷ್ಟತಾಳ, ರೂಪಕಗಳಂತಹ ತಾಳಗಳನ್ನು ಗುರುತಿಸಬಹುದು. ಭಾಷೆಯ ದೃಷ್ಟಿಯಿಂದಲೂ ಸಿರಿಸಂಪಿಗೆ ಯಕ್ಷಗಾನ ಶೈಲಿಯ ಭಾಷೆಯನ್ನೆ ಬಳಸಿಕೊಂಡಿದೆ. ಆ ಮೂಲಕ ಪೌರಾಣಿಕ ಹಿನ್ನೆಲೆಯ ಸನ್ನಿವೇಶಗಳ ಸಂಭಾಷಣೆಯನ್ನು ಗುರುತಿಸಬಹುದು.
 
  ಇಡೀ ನಾಟಕ ಒಂದು ರೀತಿ ಕಲ್ಪತ ವಾಸ್ತವ (ಪ್ಯಾಂಟಸಿ) ದಂತೆ ಗೋಚರಿಸುವುದು ಸುಳ್ಳಲ್ಲ. ದೇಹ ಮತ್ತು ಮನಸ್ಸು ಸದಾ ಒಂದಾಗಿರಬೇಕು ಎಂಬ ನೈತಿಕತೆಯನ್ನು ಮಾನವ ಸಂಕುಲಕ್ಕೆ ರೂಪಕದ ಮೂಲಕ ಕಂಬಾರರು ಕಟ್ಟಿಕೊಟ್ಟಿದ್ದಾರೆ. ನಾಟಕದ ಕೊನೆಯಲ್ಲಿ ಶಿವನಾಗದೇವ ಸಿರಿಸಂಪಿಗೆಯಲ್ಲಿ ನಮ್ಮ ಮಗನನ್ನು ಸೀಳಿಕೊಳ್ಳದ ಹಾಗೇ ನೋಡಿಕೋ ಎಂದೇಳಿ ಪ್ರಾಣ ಬಿಡುತ್ತಾನೆ.
 
  ಒಟ್ಟಿನಲ್ಲಿ ಜನಪದ ರಂಗಭೂಮಿಯಾದ ಯಕ್ಷಗಾನದ ಪ್ರಯೋಗಗಳನ್ನು ಸಿರಿಸಂಪಿಗೆ ನಾಟಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿರುವುದನ್ನು ಕಾಣಬಹುದು.
 
 
ಮುಸ್ತಫ ಕೆ ಎಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ
ಮಂಗಳೂರು ವಿಶ್ವವಿದ್ಯಾನಿಲಯ


ಶನಿವಾರ, ಏಪ್ರಿಲ್ 18, 2015

ಕ್ಯಾಂಪಸ್ನಲ್ಲಿ "ನಿರ್ಮಲ ಪರಿಸರ, ಸ್ವಚ್ಛತೆ ನಿರಂತರ ಪರಿಕಲ್ಪನೆ"

ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ದೊರೆತು ಹಲವು ತಿಂಗಳುಗಳೆ ಸಂದಿವೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ರಾಷ್ಟ್ರದಾದ್ಯಂತ ಹಲವಾರು ಸಂಘ- ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಅಭಿಯಾನಕ್ಕೆ ಕೈ ಜೋಡಿಸಿ ತಮ್ಮ ತಮ್ಮ ಪರಿಸರವನ್ನು ನಿರ್ಮಲವಾಗಿಡಲಾರಂಭಿಸಿದರು. ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ತರವಾದ ಚಚರ್ೆಗಳು ನಡೆದು, ಪರ ವಿರೋಧ ಅಭಿಮತಗಳು ಸಂಗ್ರಹವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ರಹಿತವಾದ ಸ್ವಯಂ ಪ್ರೇರಿತ ಪರಿಸರ ಕಾಳಜಿಯುಳ್ಳ ಹಲವಾರು ಸಂಸ್ಥೆಗಳು ಸದ್ದಿಲ್ಲದೆ, ಸುದ್ದಿಯಾಗದೆ ಸ್ವಚ್ಛತಾ ಅಭಿಯಾನ ಕೈಗೊಂಡು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ.

Mangalore University facebook page photos

ಭಾರತದಲ್ಲಿಯೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯವೊಂದು ಹಲವಾರು ಗ್ರಾಮೀಣ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಿಸರ ಕ್ರಾಂತಿಗೆ ಕೈ ಹಾಕುವ ಮೂಲಕ ನಿರ್ಮಲ ಪರಿಸರ, ಸ್ವಚ್ಚತೆ ನಿರಂತರ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ.

Mangalore University facebook page photos

ಹೌದು ಮಂಗಳೂರು ವಿಶ್ವವಿದ್ಯಾನಿಲಯವು ನವೆಂಬರ್ 2014ರಲ್ಲಿ ಮೊದಲಬಾರಿಗೆ ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ "ಪರಿಸರ ಸ್ನೇಹಿ" ಮಾದರಿ ವಿಶ್ವವಿದ್ಯಾನಿಲಯವಾಗಿ ಬಿಂಬಿತವಾಯಿತು. ಪ್ರಸ್ತುತ ಪ್ರತಿ ತಿಂಗಳ ಮೂರನೇ ಶುಕ್ರವಾರ ಸಂಜೆ 4.30 ಗಂಟೆಯಿಂದ ಕ್ಯಾಂಪಸ್ ಕ್ಲಿನಿಂಗ್ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. 
ಮಂಗಳಗಂಗೋತ್ರಿಯ ಅಸುಪಾಸಿನ ಗ್ರಾಮಗಳಾದ ಕೊಣಾಜೆ, ಅಸೈಗೊಳಿ ಗ್ರಾಮಗಳ ಬಸ್ಸು ನಿಲ್ದಾಣ, ವಾಣಿಜ್ಯ ಸಂಕೀರ್ಣ, ಕ್ಯಾಂಪಸ್ ಅವರಣದಲ್ಲಿರುವ ಶಾಲಾ ಕಾಲೇಜುಗಳನ್ನೂ ಒಳಗೊಂಡಂತೆ ವಿವಿಯ ಕ್ಯಾಂಪಸನ್ನುವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ಸ್ಥಳಿಯ ಗ್ರಾಮೀಣ ಸಂಘಟನೆಗಳು ಸುಮಾರು 20 ಖಾಯಂ ತಂಡಗಳನ್ನಾಗಿ ಮಾಡಿಕೊಂಡು ಕ್ಯಾಂಪಸ್ ಕ್ಲಿನ್ ಮಾಡಲಾಗುತ್ತಿದೆ. ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಅದನ್ನು ಕಾರ್ಯ ಸೂಚಿಯಂತೆ ಬೆರ್ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗೆಗಿನ ಪ್ರಾಕ್ಟಿಕಲ್ ಅಂಶಗಳೊಂದಿಗೆ, ಥಿಯರಿ ಕಾನ್ಸೇಪ್ಟ್ ಅರ್ಥಹಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ನಿಷೇದ ಮಾಡವ ಮೂಲಕ ಪರಿಸರ ಸ್ನೇಹಿ ಕ್ಯಾಂಪಸ್ ರೂಪಿಸುವ ಯೋಜನೆ ವಿವಿಯು ಹಮ್ಮಿಕೊಂಡಿದೆ. ಈ ಅಭಿಯಾನ ರಾಜಕಾರಣಿಗಳಂತೆ ಒಂದು ದಿನಕ್ಕೆ ಮಾತ್ರ ಸೀಮಿತವಾದ ಯೋಜನೆಯಲ್ಲ. ಪ್ರತಿ ಶೈಕ್ಷಣಿಕ ವರ್ಷದ ಸೆಮಿಸ್ಟರ್ಗಳಲ್ಲಿ ನಾಲ್ಕು ಬಾರಿಯಾದರೂ ಸ್ವಚ್ಛತಾ ಅಭಿಯಾನ ಮಾಡುವ ಕಾರ್ಯತಂತ್ರವನ್ನು ಯುನಿವರ್ ಸೀಟಿ ಹಮ್ಮಿಕೊಂಡಿದೆ.
 
ಮಂಗಳೂರು ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕೊಣಾಜೆ ಎಂಬ ಗ್ರಾಮದಲ್ಲಿ ವಿಶ್ವವಿದ್ಯಾನಿಲಯ ತನ್ನ ಕಾರ್ಯವ್ಯಾಪ್ತಿಯನ್ನಾಗಿ ಮಾಡಿಕೊಂಡಿದೆ. ಸುಮಾರು 333 ಎಕರೆ ವಿಸ್ತೀರ್ಣವಿರುವ ಕ್ಯಾಂಪಸ್ ಅರ್ಧದಷ್ಟು ಸಸ್ಯ ಶಾಮಲೆಯ ತವರಾಗಿ ವಿಶಿಷ್ಟ ಮರ ಗಿಡಗಳಿಂದ ಕಂಗೊಳಿಸುತ್ತಿದ್ದಾಳೆ. ಸಸ್ಯ ಕಾಶಿಯ ಈ ಕ್ಯಾಂಪಸ್ನ ಕಾಡುಗಳಲ್ಲಿ ಇಂದಿಗೂ ನವೀಲು, ಕಾಡುಕೋಳಿ, ಕಾಡು ಹಂದಿ, ಮೊಲಗಳಂತಹ ಹಲವಾರು ಪ್ರಾಣಿ-ಪಕ್ಷಿ ಸಂಕುಲಗಳು ತಮ್ಮ ಬದುಕನ್ನು ಕಟ್ಟಿಕೊಂಡಿದೆ. ಮಂಗಳ ಗಂಗೋತ್ರಿ ಇಂದಿಗೂ ತನ್ನ ವನ್ಯ ಸಂಪತ್ತನ್ನು ಹಾಗೇ ಉಳಿಸಿಕೊಂಡು ಬಂದಿರುವುದು ವಿವಿಯ ಪರಿಸರ ಪ್ರೀತಿಗೆ ಕೈಗನ್ನಡಿಯಾಗಿದೆ. 

Mangalore University facebook page photos

"ಜಗತ್ತು ಬದಲಾಗಬೇಕೆಂದು ಎಲ್ಲರು ಬಯಸುತ್ತಾರೆ, ತಾನು ಬದಲಾಗಬೇಕೆಂದು ಯಾರು ಯತ್ನಿಸುವುದಿಲ್ಲ ಎಂಬ ಲಿಯೋ ಟಾಲ್ ಸ್ಟಾಯ್ ಮಾತು ಆಧುನಿಕ ಯುವಜನತೆ ಬದಲಾಗಬೇಕೆಂಬುದನ್ನು ಸೂಚಿಸತ್ತದೆ.ರಸ್ತೆಗಳಲ್ಲಿ ಕಸ ಬಿಸಾಡುವುದನ್ನು, ಉಗುಳುವುದನ್ನು, ಮೂರ್ತವಿಸರ್ಜನೆ ಮಾಡುವುದನ್ನು ಕೈಬಿಟ್ಟರೆ ನಮ್ಮ ಪರಿಸರದ ಅರ್ಧದಷ್ಟು ರಕ್ಷಣೆ ಮಾಡಿದಂತೆ. ಯುನಿವರ್ಸಲ್ ಪರಿಕಲ್ಪನೆಯನ್ನು ಬದ್ಧಗೊಳಿಸುವ, ಜ್ಞಾನದ ಎಲ್ಲಾ ಮಜಲುಗಳನ್ನು ಒಳಗೊಳಿಸಿಕೊಳ್ಳುವ,ಬುದ್ಧಿ ಜೀವಿಗಳನ್ನು ರೂಪಿಸುವ ಪ್ಯಾಕ್ಟರಿಯಾದ ಭಾರತದ ವಿದ್ಯಾನಿಲಯಗಳಲ್ಲಿ ಈ ರೀತಿಯ ಹೊಸ ಅಭಿಯಾನದ  ಅಗತ್ಯತೆ ಹೆಚ್ಚಿದೆ .ಶಿಕ್ಷಣದೊಂದಿಗೆ ಸಾಮಾಜಿಕ ಬದ್ದತೆಯನ್ನು ರೂಪಿಸುವ ಮೂಲಕ ಭಾರತದಂತ  ಅಭಿವೃದ್ಧಿ ಪಥದತ್ತ ಸಾಗುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು .ಈ ಮೂಲಕ ಇನ್ನಾದರೂ ದೇಶವ್ಯಾಪಿ ಶಿಕ್ಷಣ ಸಂಸ್ಥೆಗಳು ಪರಿಸರ ರಕ್ಷಣೆ ಮತ್ತು ಸ್ವಚ್ಚತೆಗೆ ಅಧ್ಯತೆ ನೀಡಬೇಕಾಗಿದೆ. ಇನ್ಯಾಕ್ ತಡ? ರಸ್ತೆಗೆ ಇಳಿದು ಕ್ಲಿನ್ ಮಾಡಿ. ರಾಜಕೀಯ ಮಾಡ್ಬೇಡಿ .


ಮುಸ್ತಫ .ಕೆ.ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ ,
ಮಂಗಳೂರು .
 


ಕಾಯಕ



  ಜಗಮಗಿಸುವ ನಾಗರಿಕ ಸಂತೆಯದು
  ಇಲ್ಲಿ ಎಲ್ಲವು ಫಟಾ -ಫಟ್
  ರಾತ್ರಿಯಾಗುತ್ತಿದ್ದಂತೆ ಕೆಂಪು ದೀಪಗಳದ್ದೇ ಕಾರುಬಾರು
  ಬೀದಿ ನಾಯಿಗಳು ಹೊಟೇಲಿನ ಮಾಂಸದ ಎಲುಬಿಗಾಗಿ
  ಕಾಯುವ ಸಮಯ
 
ಸರ್ಕಲ್ಗಳಲ್ಲಿ ನೂರಕ್ಕೂ ಐದುನೂರಕ್ಕೂ
ಕಸ್ಟಮರ್ ಹುಡುಕಾಟದಲ್ಲಿ ಆ ಕಣ್ಣುಗಳು
ಮಾರುಕಟ್ಟೆಯ ತಂತ್ರ ಅವರಿಗೂ ತಿಳಿದಿದೆ
ಘಮ-ಘಮ ಮಲ್ಲಿಗೆ ಸೆಂಟಿನದ್ದೆ ಅಬ್ಬರ
ಯಾವ ಗಂಡಸು ತಾನೇ ಸುಮ್ಮನಿರುವನು?
 
ಮಧ್ಯವರ್ತಿಗಳು ಇದ್ದಾರೆ ವ್ಯಾಪಾರ ಕುದುರಿಸಲು
ಖಾಕಿ ಕಣ್ಣು ಮುಚ್ಚಿ ಕುಳಿತಿರಲು
ಹತ್ತಿಪ್ಪತ್ತು ರೂಪಾಯಿಗಳ ಮಹದಾಸೆಗಾಗಿ
ಲಾಡ್ಜ್ಗಳ ಮಂಚ ಹೇಳುತ್ತಿವೆ ಬದುಕಿನ ವ್ಯಥೆಯ ಕಥೆಯನ್ನು
 
ಕೆದರಿದ ಕೂದಲು ಮುದುಡಿದ ಮಲ್ಲಿಗೆ
ಬಾಡಿದ ಮುಖ ಹೊತ್ತು ಹೊರ ನಡೆದಳಾಕೆ
ಆಡಿದ ಒಪ್ಪಂದದಂತೆ, ತಿಳಿಯಿತು
ಏನೋ ಇರಬಹುದು ! ಹೊಟ್ಟೆ ಪಾಡಿಗಾಗಿ
ಆದರೂ ಕೆಂದುಟಿಯ ಅವಳಿಗೆಕೆ ಈ ಕಾಯಕ !

                                                                      ಮುಸ್ತಫ .ಕೆ.ಹೆಚ್
                                                                      ಪ್ರಥಮ ಎಂ.ಎ.ಕನ್ನಡ ವಿಭಾಗ
                                                                      ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
                                                                      ಮಂಗಳಗಂಗೋತ್ರಿ
                                                                      ಮಂಗಳೂರು .
 


ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಸುದರ್ಶನ ವಿಜಯದಲ್ಲಿ ಭಗ್ನಗೊಂಡ ನಾನು ಎಂಬ ಅಹಂಕಾರ
 ಮಂಗಳೂರು ವಿಶ್ವವಿದ್ಯಾನಿದ ಪ್ರಸಾರಾಂಗವು ಇತ್ತೀಚೆಗೆ ತನ್ನ ರಜತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡಿತು.ಕನ್ನಡದ ಖ್ಯಾತ ಸಾಹಿತಿಗಳಾದ ಪ್ರೊ. ದೇಜವರೆಗೌಡ ಹಾಗೂ ನಿತ್ಯೋತ್ಸವದ ಕವಿ ನಿಸಾರ್ ಅಹ್ಮದ್ ಪ್ರಸಾರಾಂಗದ ಬೆಳ್ಳಿ ಹಬ್ಬಕ್ಕೆ ಸಾಕ್ಷಿಯಾದರು.ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗನ್ನು ನೀಡುವ ಉದ್ದೇಶದಿಂದ ಸುದರ್ಶನ ವಿಜಯ ಎಂಬ ಯಕ್ಷಪ್ರಸಂಗವನ್ನು ಪ್ರದರ್ಶಿಸಲಾಯಿತು.

ಸ್ವರ್ಗಲೋಕದ ಮಹಾಧೀಪತಿ ಇಂದ್ರನ ಸಿಂಹಾಸನದ ಮೇಲೆ ಸದಾ ಅಸುರರ ಕಣ್ಣು ಹೊಂಚುಹಾಕುತಿದ್ದ ಯುಗವದು. ಸಂಧರ್ಭ ಸಿಕ್ಕಾಗ ದೇವೆಂದ್ರನ ವಿರುದ್ಧ ಯುದ್ದ ಮಾಡಿ ಅಸುರರು ಜಯಶೀಲರಾಗುತ್ತಿದ್ದರು.ಅದರೆ ದೈವ ಬಲದ ಕೊರತೆಯಿಂದಲೂ, ದೇವತೆಗಳ ತಂತ್ರದಿಂದಲೂ ತಾವು ಪಡೆದ ವರದಿಂದಲೆ ಸಂಹಾರವಾಗುವುದು ಅಸುರ ಕುಲದ ಜಾಯಮಾನ. ವರವನ್ನು ಶಾಪವಾಗಿ ಪರಿವರ್ತನೆಗೊಳಿಸುವ ದೇವತೆಗಳ ಚತುರತೆ ನಮ್ಮ ಪುರಾಣಗಳ ಕಥಾ ಹಂದರದೊಳಗಿನ ತಂತ್ರಗಾರಿಕೆಯು ಹೌದು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಸ್ವರ್ಗವೆಂಬ ಮಾಯಾಲೋಕದ ಆಧಿಕಾರ ಪಡೆಯಲು ಯತ್ನಿಸುವ ಶತ್ರುಪ್ರಸೂಧನನೆಂಬ ಅಸುರನು ದೇವೆಂದ್ರನನ್ನು ಯುದ್ಧದಲ್ಲಿ ಸಾರಾ ಸಗಟಾಗಿ ಸೋಲಿಸುತ್ತಾನೆ. ಆ ಮೂಲಕ ಸುದರ್ಶನ ವಿಜಯ ಯಕ್ಷಪ್ರಸಂಗದ ಪ್ರಾರಂಭಿಕ ಘಟ್ಟವನ್ನು ಗುರುತಿಸಬಹುದು.

 "ಆಯುದವೊಂದು ಜೀವಾತ್ಮದ ರೂಪವನ್ನು ತಾಳಿ, ತನ್ನನ್ನು ಸಂಹರಿಸಬೇಕೆಂಬ ವರ" ಶತ್ರುಪ್ರಸೂಧನನ ಈ ಬಂಡ ದೈರ್ಯಕ್ಕೆ ಕಾರಣವಾಯಿತು. ಅ ವರದ ಮೂಲಕ ಸಾವನ್ನು ಗೆಲ್ಲುವ ಸಮರ್ಥವಾದ ಪ್ರಯತ್ನವನ್ನು, ಚತುರ ಶೀಲತೆಯ ಮೂಲಕ ತನ್ನ ಪೂರ್ವಿಕರಿಗಾದಂತೆ ತನಗೂ ದೇವಾನು ದೇವತೆಗಳಿಂದ ಕುತಂತ್ರದ ಸಾವು ಬರಬಾರದೆಂದು, ತಾರ್ಕಿಕವಾಗಿ ಯೋಚಿಸಿ ಪಡೆದ ವರವನ್ನು ಚಿರಸ್ಥಾಯಿಗೊಳಿಸಲೆತ್ನಿಸುತ್ತಾನೆ. ಆ ಮೂಲಕ ಶತ್ರು ಪ್ರಸೂಧನನಲ್ಲಿಯ ತಾತ್ವಿಕ ಅಭಿವ್ಯಕ್ತಿಯನ್ನು ಷಡ್ಯಂತರದಿಂದ ಪಾರಾಗುವ ಚಕ್ರವ್ಯೂವದ ಬೇದಕ ನೆಲೆಯಾಗಿ ಗುರುತಿಸಬಹುದು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ

ಮುಳ್ಳನ್ನು ಮುಳಿನಿಂದ ತೆಗೆಯಿರಿ ಎಂಬ ಗಾದೆ ಮಾತಿನಂತೆ ಶತ್ರುಪ್ರಸೂಧನ ಪಡೆದ ವರದಿಂದಲೇ ಸಾವು ಎಂಬ ಅಂಶ ಅದಾಗಲೇ ಹರಿಯ ಚಿತ್ತದಲ್ಲಿ ಸಂಕಲ್ಪಿಸಲ್ಪಟ್ಟಿತು. ಅದಕ್ಕಾಗಿ ವಿಷ್ಣು ತನ್ನ ಚಿತ್ತದೊಳಗಣ ನಾಟಕ ರಂಗಕ್ಕೆ ಪಾತ್ರದಾರಿಗಳನ್ನು ಅಯ್ಕೆ ಮಾಡಿಕೊಳ್ಳುತ್ತಾನೆ. ನಿಮಿತ್ತಗಳನ್ನು ಸೃಷ್ಟಿಸುತ್ತಾ ಹೊಸ ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಾ, ಸೂತ್ರಧಾರನಂತೆ ಎಲ್ಲವನ್ನು ನಿಯಂತ್ರಿಸಿ, ತಾನು ಮಾಡಲೇತ್ನಿಸಿದ ಕಾರ್ಯತಂತ್ರವನ್ನು ಇತರ ಪಾತ್ರಗಳ ಸ್ಮೃತಿ ಮತ್ತು ಬಲದ ಮೂಲಕ ಮಾಡಿಸುತ್ತಾನೆ.
ಇತ್ತ ವೈಕುಂಠದಲ್ಲಿ ಲಕ್ಷ್ಮಿ ಶೃಂಗಾರ ರಸದಿಂದ ವಿಷ್ಣುವಿನ ಸಾಹಸವನ್ನು ಉದಾತ್ತವಾಗಿ ಕೊಂಡಾಡಿ, ತನ್ನ ಪ್ರೀತಿಯ ಇನಿಯನಾದ ಅಚ್ಯುತ್ತನಲ್ಲಿ ಚ್ಯುತಿ ಇಲ್ಲವೆಂದು ಬಣ್ಣಿಸುತ್ತಾಳೆ. ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮಿಯ ಮಾತನ್ನು ಕೇಳಿ ವಿಷ್ಣುವಿನ ಕರದಲ್ಲಿರುವ ಸುದರ್ಶನ ಕೇರಳಿ ಕೆಂಡಾ ಮಂಡಲನಾಗಿ ಜೀವಾತ್ಮದ ರೂಪವನ್ನು ತಾಳುತ್ತಾನೆ.
ಕರದಿಂದ ಕೇಳಗಿಳಿದು ತನ್ನ ತಾಯಿಯಾದ ಲಕ್ಷ್ಮಿಯ ಜೊತೆ ಸುದರ್ಶನ ವಾಕ್ ಯುದ್ಧ ಮಾಡಿ, ವಿಷ್ಣು ಇದುವರೆಗೂ ಮಾಡಿದ ಎಲ್ಲಾ ಸಾಹಸಭೂಷಿತ ಯುದ್ದಾಂತ ಅಸುರ ವಧೆಗಳಿಗೆ ತಾನೇ ಕಾರಣ ಹೊರತು ವಿಷ್ಣು ಬರೀಯ ನಿಮಿತ್ತ ಮಾತ್ರ ಎಂದು ತನ್ನ ವ್ಯಕ್ತಿತ್ವದಲ್ಲಿ ಅಡಗಿದ ನಾನು ಎಂಬ ಅಹಂಕಾರದ ಮಾನವೀಯ ಸ್ವಭಾವವನ್ನು ಅಭಿವ್ಯಕ್ತಿಸಿದ. ಈ ಮಾತುಗಳನ್ನು ಕೇಳಿ ಶಾಂತ ಚಿತ್ತದಿಂದ ವಿಷ್ಣು ಮುಗುಳ್ನಕ್ಕನು.
ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
ಕೋಪಗೊಂಡ ಲಕ್ಷ್ಮಿ ವಿಷ್ಣು ಅವತಾರ ಪುರುಷನಾಗಿದ್ದ್ದಾಗ ನೀನೆಲ್ಲಿದ್ದೆ? ಎಂದು ತನ್ನ ಅಗ್ನಿಯಂತಹ ಪ್ರಶ್ನೆಯನ್ನು ಕೇಳಿದಳು. ವಿಷ್ಣುವಿನ ಮತ್ಸ್ಯಾವತಾರದಲ್ಲಿ ಮತ್ಸ್ಯದ ರೆಕ್ಕೆಯಲ್ಲಿಯು, ಕೂರ್ಮಾವತಾರದಲ್ಲಿ ಚಿಪ್ಪುವಿನಲ್ಲಿಯು, ವರಹಾವತಾರದಲ್ಲಿ ವರಹದ ದಾಡೆಯಲ್ಲಿಯು, ನರಸಿಂಹಾವತಾರದಲ್ಲಿ ಕರಗಳ ನಕದಲ್ಲಿಯು, ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ನುಕಿದ ಬ್ರಾಹ್ಮಣಾವತಾರದಲ್ಲಿ ಬ್ರಾಹ್ಮಣಬಾಲಕನ ಪಾದದಲ್ಲಿಯು ನಾನಿದ್ದೆ ಎಂದು ಗರ್ವದಿಂದ ಎದೆತಟ್ಟಿ ಸುದರ್ಶನ ನುಡಿದನು.
ವಿಷ್ಣು ಸುದರ್ಶನ ಹೇಳಿದ ಮಾತು ಸತ್ಯವೆಂದು ಅನುಮೋದಿಸುತ್ತಾನೆ. ಇನ್ನೂ ಮುಂದೆ ತಾನು ಇಂತಹ ಸಣ್ಣ ಪುಟ್ಟ ಯುದ್ಧ ಮಾಡುವುದಿಲ್ಲವೆಂದು, ತನಗೆ ದೊಡ್ಡ ಯುದ್ದಗಳಿದ್ದರೆ ಹೇಳಿ ಕಳುಹಿಸುವಂತೆ ನುಡಿದು ಸುದರ್ಶನ ತೆರಳುತ್ತಾನೆ. ಸುದರ್ಶನನ ಅಹಂನನ್ನು ಸುಟ್ಟುಹಾಕಲು ವಿಷ್ಣು ಜೇಡರ ಬಲೆಯಂತೆ ತಂತ್ರೋಪಾಯವನ್ನು ರಚಿಸಿದ.

ಮಾನವನಿಗೆ ಭೂಮಿಯಲ್ಲಿರುವ ಸುಖವು ದೇವತೆಗಳಿಗಿಲ್ಲ. ಬಾಯಾರಿದಾಗ ನೀರು ಸಿಕ್ಕರೆ ಸುಖದ ಉನ್ಮಾದವೆ ಬೇರೆ. ಸ್ವರ್ಗದಲ್ಲಿ ಬಾಯಾರಿಕೆ ಇಲ್ಲದಿರುವ ಕಾರಣದಿಂದ ನೀರು ಕುಡಿಯುವ ಸುಖವು ದೇವತೆಗಳಿಗಿಲ್ಲ. ಈಗ ಸುಖ ಪಡಲು ಸ್ವರ್ಗವನ್ನೆ ತಾನು ಕಳೆದುಕೊಂಡಿರುವುದಾಗಿ ದೇವೆಂದ್ರನು ಮಹಾ ವಿಷ್ಣುವಿನಲ್ಲಿ ಭಿನ್ನವಿಸಿಕೊಳ್ಳುತ್ತಾನೆ. ಸ್ವರ್ಗವನ್ನು ಅಸುರ ಶತ್ರುಪ್ರಸೂಧನನಿಂದ ವಿಮುಕ್ತಗೊಳಿಸಿಕೊಡುವಂತೆಯು, ಅತನನ್ನು ವದಿಸುವಂತೆಯು ಮನವಿಯನಿತ್ತನ್ ಅ ಸ್ವರ್ಗಾಧಿಪತಿ.
ದೇವೆಂದ್ರನ ಭಿನ್ನಹವನ್ನು ಸ್ವೀಕರಿಸಿದ ವಿಷ್ಣು ರಾಕ್ಷಸನ ಸಂಹಾರಕ್ಕೆ ಲೋಹವತಿ ಪಟ್ಟಣಕ್ಕೆ ಅಗಮಿಸುತ್ತಾನೆ. ರಣರಂಗದಲ್ಲಿ ಶತ್ರುಪ್ರಸೂಧನ ತನಗೆ ನೀಡಿದ ವರದ ಸಾಂಸ್ಥಿಕ ಧೋರಣೆ ಮತ್ತು ಸಾವು ಅಷ್ಟು ಸುಲಭದಲ್ಲಿ ತನ್ನನ್ನು ಎದುರುಗೊಳ್ಳಲು ಸಾಧ್ಯವಿಲ್ಲವೆಂದು ವಿಷ್ಣುವನ್ನು ಮೂದಲಿಸುತ್ತಾನೆ.

ಛಾಯಾಚಿತ್ರ ಚಂದ್ರಶೇಖರ್ ಎಂ.ಬಿ
ಸಾಂದರ್ಭಿಕ ಚಿತ್ರ
 
ಕ್ರೋದಗೊಂಡ ವಿಷ್ಣು ತನ್ನ ನಾಟಕೀಯತೆಯ ಮೂಲಕ, ವರವನ್ನು ಶಾಪವಾಗಿ ಪರಿವರ್ತಿಸಲು ಅಯುಧವಾಗಿಯು ಜೀವಾತ್ಮವಾದ ಸುದರ್ಶನಲ್ಲಿ ಅಜ್ಞಾಪಿಸುವನು, ಸುದರ್ಶನ ಶತ್ರುಪ್ರಸೂಧನನನ್ನು ಸಂಹರಿಸಿ ವಿಷ್ಣುವಿನ ಬಳಿ ಬರುತ್ತಾನೆ.
ವಿಷ್ಣು ತನ್ನ ಕರವನ್ನು ಸೇರುವಂತೆ ಸುದರ್ಶನನಿಗೆ ಆದೇಶಿಸಿದಾಗ, ಒಲ್ಲೆ ಎಂಬಂತೆ ಸುದರ್ಶನ ತನ್ನ ಮದವನ್ನು ಅಭಿವ್ಯಕ್ತಿಸಿ ತಿರಸ್ಕರಿಸುವನು. ಮಹಾ ವಿಷ್ಟುವಿನ ಕರಗಳ ಸುದರ್ಶನ ಜೀವಾತ್ಮದ ರೂಪದಲ್ಲಿ ಅಹಂಕಾರ ಪಟ್ಟರೆ ಹರಿಯು ಸುಮ್ಮನಿರುವ ಸ್ವಾಮಿಯೇ? ಖಂಡಿತವಾಗಿಯು ಇಲ್ಲ ಸುದರ್ಶನ ಹರಿಯ ಕರದಲ್ಲಿ ಐಕ್ಯವಾಗದೆ, ಸ್ವಾತಂತ್ರ್ಯನಾಗಲು ಯತ್ನಿಸಿದ್ದು ಹರಿಯ ಕ್ರೋದಕ್ಕೆ ಕಾರಣವಾಯಿತು. ಭೂಲೋಕದಲ್ಲಿ ಮಾನವನಾಗಿ ಹುಟ್ಟಿ ನಿನ್ನ ಅಹಂಕಾರವನ್ನು ಕಳೆ ಎಂದು ಹರಿ ಶಾಪವನೀತ್ತ. ಡವಾಗಿ ತನ್ನ ತಪ್ಪನ್ನು ಅರ್ಥಯಿಸಿಕೊಂಡ ಸುದರ್ಶನ ತನ್ನ ಸ್ವಾಮಿಯಲ್ಲಿ ಶಾಪವನ್ನು ಮನ್ನಿಸುವಂತೆ ಭಿನ್ನಯಿಸಿಕೊಳ್ಳುತ್ತಾನೆ. ಕೊನೆಗೆ ಸುದರ್ಶನನ ಪ್ರಲಾಪ ಸಹಿಸಲಾಗದೆ  ಕ್ಷಾತ್ರ ವಂಶದಲ್ಲಿ ಅಗ್ನಿ ಮಹರ್ಷಿಯ ಮಗನಾಗಿ ಹುಟ್ಟು ಅಲ್ಲಿ ನಾನು ನಿನಗೆ ಗುರುವಾಗಿ ನಿನ್ನ ಅಹಂಕಾರವನ್ನು ವಿರಕ್ತಿಗೊಳಿಸುವುದಾಗಿ ವಿಷ್ಣು ನುಡಿಯುತ್ತಾನೆ.
ಇಡೀ ಯಕ್ಷಪ್ರಸಂಗದ ಅಭಿವ್ಯಕ್ತಿಯ ನೆಲೆಯು ಮಾನವ ಸಹಜವಾದ ಅಹಂಕಾರದ ಪರಿಕಲ್ಪನೆಯನ್ನು ಜೀವಾತ್ಮವಾದ ಅಯುಧ ಒಂದರಲ್ಲಿ ಒಡಮೂಡಿದಾಗ ಅದನ್ನು ಛೀದ್ರಗೊಳಿಸಿ, ಸಾಂಸ್ಕೃತಿಕ ಸ್ಥಾನ ಮಾನಗಳನ್ನು ಎತ್ತಿ ಹಿಡಿಯುವ ಕೆಲವನ್ನು ಮಾಡಲಾಗಿದೆ.
 ತಮ್ಮ ಸಾಮಥ್ರ್ಯಕ್ಕನುಗುಣವಾಗಿ ತಮ್ಮ ಸ್ಥಾನ ಮಾನವನ್ನು ಕಂಡುಕೊಳ್ಳಬೇಕೆಂಬ ನೀತಿ ಪಾಠದೊಂದಿಗೆ, ಒಂದು ತಂತ್ರ ಎರಡು ಭಿನ್ನ ಅಯಾಮಗಳಲ್ಲಿ ಸುದರ್ಶನನ ಪರಾಕ್ರಮದ ಮೂಲಕ ಶತ್ರುಪ್ರಸೂಧನನ ಸಂಹಾರ ಮತ್ತು ವಿಷ್ಣುವಿನಿಂದ ಸುದರ್ಶನನ ಅಹಂಕಾರದ ನಿರಶನವನ್ನು ಕಾಣಬಹುದಾಗಿದೆ.
 ಸುದರ್ಶನ ವಿಜಯ ಯಕ್ಷ ಪ್ರಸಂಗದ ಭಾಗವತಿಕೆಯನ್ನು ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಶಶಿಧರ್ ಕುಲಾಲ್ ಸುದರ್ಶನನ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಷ್ಣುವಾಗಿ ವಿಷ್ಣು ಶರ್ಮರವರು ಮನೋಜ್ಞವಾಗಿ ಅಭಿನಯವನ್ನಿತ್ತಿದ್ದಾರೆ. ದೇವೆಂದ್ರನಾಗಿ ರವಿರಾಜ್ ಭಟ್, ಬಲಗಳಾಗಿ ಲೋಕೇಶ್ ಮಚ್ಚೂರು ಮತ್ತು ಚಿನ್ಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
 
ಮುಸ್ತಫ .ಕೆ. ಹೆಚ್
ಪ್ರಥಮ ಎಂ.ಎ.ಕನ್ನಡ ವಿಭಾಗ
ಎಸ್. ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಮಂಗಳಗಂಗೋತ್ರಿ,
ಮಂಗಳೂರು

 

ಸೋಮವಾರ, ಮಾರ್ಚ್ 23, 2015

ಮೆಕ್ಕಾ ದಾರಿಯಲ್ಲಿ ಒಡಮೂಡಿದ ಬೆಳಕಿನ ಜ್ಞಾನ - ನಾಟಕ ವಿಮರ್ಶೆ

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಅಯೋಜಿಸಿದ ಬಹುಭಾಷಾ ಲೇಖಕಿಯರ ಸಮಾವೇಶದಲ್ಲಿ ಮೆಕ್ಕಾ ದಾರಿ ಎಂಬ ಅನುವಾದಿತ ನಾಟಕ ರಂಗಪ್ರಯೋಗಗೊಂಡಿತು. ದಕ್ಷಿಣ ಅಫ್ರಿಕಾದ ಖ್ಯಾತ ನಾಟಕಕಾರ ಅಥೋಲ್ ಫುಗಾರ್ಡರ ದಿ ರೋಡ್ ಟು ಮೆಕ್ಕಾ ನಾಟಕವನ್ನು ಕನ್ನಡಕ್ಕೆ ಖ್ಯಾತ ರಂಗಕರ್ಮಿ ಪ್ರಸನ್ನರವರು ಅನುವಾದಿಸಿ ನಿರ್ದೇಶಿಸಿದ್ದಾರೆ. ಈ ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ತರಿಕಿಟ ಕಲಾ ಕಮ್ಮಟದ ಸಾರಥ್ಯದಲ್ಲಿ ನಿರೂಪಣೆಗೊಂಡತು.

ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿರುವ ಹಳ್ಳಿಗಾಡಿನ ಒಂಟಿ ಅನಾಥ ವಿಧವೆ ವೃದ್ಧೆ ಹೆಲನ್ ನಾಟಕದ ನಾಯಕಿ. ಆಕೆಯ ಏಕಾಂಗಿತನದ ಅಭಿವ್ಯಕ್ತಿಯ ನೆಲೆಯಾಗಿ ರೂಪುಗೊಂಡ ವಿಭಿನ್ನ ಅಯಾಮವೇ ಕಲೆ. ಕಲಾ ಸೃಷ್ಟಿಯ ಮೂಲಕ ಬೆಳಕಿನ ಹುಡುಕಾಟದಲ್ಲಿ ತೊಡಗುವ ಹೆಲನ್ ಸಿಮೆಂಟು, ಮರಳು, ಪಿಂಗಾಣಿಯನ್ನು ಬಳಸಿ ಗೂಬೆ, ಒಂಟೆ, ನವಿಲು ಮುಂತಾದ ಅನೇಕ ಜನಪದೀಯ ಕಲಾ ಸೃಷ್ಟಿಯನ್ನು ತನ್ನ ಮನೆಯಲ್ಲಿ ನಿರ್ಮಿಸುತ್ತಾಳೆ. ಬೆಳಕು ಕಲಾಕೃತಿಯ ಮೇಲೆ ಪ್ರತಿಫಲಿಸಿದಾಗ ಜ್ಞಾನವನ್ನು ಹುಡುಕುವ ಜ್ಞಾನವೃದ್ಧರಂತೆ ಪಶ್ಚಿಮದ ಮೆಕ್ಕಾ ನಗರದ ಕಡೆ ಹೊರಟಂತೆ ಕಲಾಕೃತಿಗಳು ಗೋಚರಿಸುತ್ತದೆ. ಅ ಕಲಾ ಕೃತಿಗಳ ರಚನೆಯ ಮೂಲಕ ಒಂಟಿತನದ ಬೇಗೆಯಿಂದ ಹೊರಬರಲು ಯತ್ನಿಸುವ ಹೆಲನ್, ಗ್ರಾಮದ ಸಂಪ್ರದಾಯಸ್ಥ ಕ್ರೈಸ್ತ ಮತಸ್ಥರ ಕಣ್ಣಲ್ಲಿ ಧರ್ಮಭ್ರಷ್ಟಳಾಗಿ ಗುರುತಿಸಿಕೊಳ್ಳುತ್ತಾಳೆ. ಅಕೆಯನ್ನು ಸಂಶಯದಿಂದ ಕಾಣುವ ಅಲ್ಲಿನ ಜನರು ಹೇಗಾದರು ಮಾಡಿ ಹೆಲನಳ ಅಸ್ತಿ ಕಬಳಿಸಿ, ವೃದ್ದಾಶ್ರಮಕ್ಕೆ ತಳ್ಳುವ ಉನ್ನಾರ ಮಾಡಿದರು.ಅದಕ್ಕಾಗಿ ಪಾದ್ರಿ ಮಾರಿಯಸ್ ಹೆಲನಳ ಮೇಲೆ ತುಂಬಾ ಕರುಣೆ ತೋರುವವನಂತೆ ನಟಿಸುತ್ತಾನೆ.ಸದ್ದಿಲ್ಲದೆ ಗ್ರಾಮದ ಜನ ಆಕೆಯ ಮನೆಗೆ ಬೆಂಕಿ ಹಚ್ಚುವುದು,ಕಲ್ಲು ಹೊಡೆಯುವುದನ್ನು ಮಾಡಿ ಬೇದರಿಸುತ್ತಾರೆ.ಅಕೆಗೆ ಹುಚ್ಚಿಯ ಪಟ್ಟ ಕಟ್ಟಿ ಯಾರು ಅಕೆಗೆ ಸಹಾಯ ಮಾಡದಂತೆ ಯೋಜನೆ ರೂಪಿಸಲಾಗುತ್ತದೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಈ ಎಲ್ಲಾ ವಂಚನೆಯನ್ನು  ಮುದುಕಿ ಹೆಲೆನಳ ಅಕ್ಷರಸ್ಥ ಗೆಳತಿ ಎಲ್ಸಿ ಬಯಲುಗೊಳಿಸುತ್ತಾಳೆ.ಇದರಿಂದ ಅತ್ಮ ಸ್ಥೈರ್ಯ ಪಡೆದ ಹೆಲನ್ ಪಾದರ್ ಮಾರಿಯಸ್ ನೀಡಿದ ವೃದ್ಧಾಶ್ರಮ ಪ್ರವೇಶ ಪತ್ರಕೆ ಸಹಿಹಾಕದೆ ನಿರಾಕರಿಸುತ್ತಾಳೆ. ಅ ಮೂಲಕ ಮಹಿಳಾ ಶೋಷಣೆಗೆ ಪ್ರತಿ ದ್ವನಿಯನ್ನು ಹೆಲನ್ ಅಭಿವ್ಯಕ್ತಿಸುವುದನ್ನು ಕಾಣಬಹುದು.
ದಲಿತ ಮತ್ತು ಮಹಿಳಾ ಪರ ಹೊರಾಟಗಾರ್ತಿ ದು.ಸರಸ್ವತಿಯವರು ಹೆಲನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.ಪಕ್ಕಾ ಗ್ರಾಮೀಣ ಅನಕ್ಷರಸ್ಥ ವೃದ್ಧ ಮಹಿಳೆಯಂತೆ ಕಂಗೊಳಿಸುವ ಅವರ ಅಭಿನಯ ಜೀವಪರವಾದ ಮುಗ್ಧತೆಯಿಂದ ಹಾಸುಹೊಕ್ಕಾಗಿದೆ. ದಕ್ಷಿಣ ಕನ್ನಡದ ಮೇರು ಪ್ರತಿಭೆ ವಾಣಿ ಪರಿಯೋಡಿಯವರು ಮುದುಕಿ ಹೆಲನಳ ಗೆಳತಿ ಎಲ್ಸಿಯ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಗ್ಲಾಮರಸ್ ಗೊಂಬೆಯಂತೆ ಕಂಗೊಳಿಸುವ ವಾಣಿಯವರ ಹಾವ-ಭಾವ ಯುವಕರ ಮನಸ್ಸನ್ನು ಸೇಳೆಯುದರಲ್ಲಿ ಸಂಶಯವಿಲ್ಲ. ಖಳನಾಯಕನಂತೆ ಎಂಟ್ರಿಕೊಡುವ ಪಾದ್ರಿ ಮಾರಿಯಸ್ ಪಾತ್ರವನ್ನು ಚಿತ್ರ ನಟ ಚಂದ್ರಹಾಸ್ ಉಳ್ಳಾಲ್ ರವರು ಮನೋಜ್ಞವಾಗಿ ಅಭಿನಯಿಸುವ ಮೂಲಕ ಇಡೀ ನಾಟಕವನ್ನು ವರ್ಣರಂಜಿತ ಕತ್ತಲು-ಬೆಳಕಿನ ನಡುವೆ ಮಂತ್ರ ಮುಗ್ದಗೊಳಿಸಿದ್ದಾರೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಹೆಲನ್ ಮತ್ತು ಎಲ್ಸಿ ಪಾತ್ರಗಳು ಇಡೀ ನಾಟಕದುದ್ದಕ್ಕೂ ಭಿನ್ನ ಅಯಾಮದಿಂದ ಗುರುತಿಸಲ್ಪಡುತ್ತದೆ. ಹೆಲನ್ ಅನಕ್ಷರಸ್ಥ  ಗ್ರಾಮೀಣ ಮಹಿಳೆ. ಎಲ್ಸಿ ನಗರ ಸಂಸ್ಕೃತಿಯ ಅಕ್ಷರಸ್ಥ ಮಹಿಳೆ.ಅದರೂ ಸಂಪ್ರದಾಯಸ್ಥ ಪುರುಷ ಸಮಾಜದಿಂದ ಹೆಲನ್ ಬಚಾವಾಗುತ್ತಾಳೆ.ಎಲ್ಸಿಯ ಕಥೆ ಅಗಲ್ಲ, ಅಷ್ಟೊಂದು ವಿದ್ಯಾಭ್ಯಾಸ ಪಡೆದು ಶಿಕ್ಷಿತಳಾಗಿದ್ದರು ವಿವಾಹಿತ ಪುರುಷನೊಂದಿಗೆ ಸಂಬಂಧಹೊಂದಿ ಗರ್ಭದರಿಸಿ,ಗರ್ಭಪಾತ ಮಾಡಿಸಿಕೊಳ್ಳುವ ಸನ್ನಿವೇಶವನ್ನು ಗಮನಿಸಬಹುದು. ಇದು ಒಂದು ರೀತಿ ತಿಳಿದು ತಿಳಿದು ಮಹಿಳಾ ಶೋಷಣೆಗೆ ತಮ್ಮನ್ನು ಒಡ್ಡಿಕೊಳ್ಳುವ ಸ್ಥಿತಿ ಎಂದರೆ ತಪ್ಪಾಗಲಾರದು.
ನಾಟಕದ ಇನ್ನೊಂದು ಅಯಾಮವು ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣ ಭೇದ ನೀತಿಯನ್ನು, ಅಂದಿನ ಕ್ರೈಸ್ತ ಮತ ಮತ್ತು ಚರ್ಚೆ ಬಿಳಿಯರ ಪರವಾಗಿತ್ತೆಂಬುದನ್ನು ಪ್ರತಿಪಾದಿಸುತ್ತದೆ.ಕಥಾ ಹಂದರದ ಬಗ್ಗೆ ಪ್ರೆಕ್ಷಕರಿಗೆ ಹಲವಾರು ಪ್ರಶ್ನೆಗಳು ಉದ್ಬವಿಸುವುದು ಸಹಜ. ತನ್ನ ಮನೆ ಬಿಟ್ಟು ಹೊರ ಜಗತ್ತಿನ ಬಗ್ಗೆ ತಿಳುವಳಿಕೆ ಇರದ ಹೆಲೆನ್ಗೆ ಮೆಕ್ಕಾದ ಜನರು ಜಾಣರು,ಜ್ಞಾನ ವೃದ್ದರಾಗಿ ಕಂಡದ್ದು ಹೇಗೆ?ಅಕೆ ಎಂದು ಮೆಕ್ಕಾ ಪ್ರಯಾಣ ಮಾಡಿರಲಿಲ್ಲ.ಅದರೂ ಅಕೆಯ ಕಲಾಕೃತಿಗಳು ಪಶ್ಚಿಮದ ಕಡೆ ಹೊರಟ ಮೆಕ್ಕಾ ದಾರಿಯಲ್ಲಿ ಪ್ರಯಾಣಿಸುವ ಒಂಟೆ, ನವಿಲು, ಜ್ಞಾನ ವೃದ್ಧರಂತೆ ಕಂಗೊಳಿಸಿದವು. ನಾಟಕದ ಕೊನೆಯಲ್ಲಿ ಪಾದ್ರಿ ಮಾರೆಸಸ್ ಸಹ ಮೆಕ್ಕಾವನ್ನು ನಕ್ಷೆಯಲ್ಲಿ ನೋಡಿ ಗುರುತಿಸುವುದಾಗಿ ನುಡಿಯುತ್ತಾನೆ.ಒಟ್ಟಿನಲ್ಲಿ ಕೆಲವಾರು ಅಸ್ಪಷ್ಟತೆಗಳು ನಾಟಕದ ಕಥಾ ಹಂದರದಲ್ಲಿ ಅಭಿವ್ಯಕ್ತವಾಗಿದೆ.
ಒಟ್ಟಿನಲ್ಲಿ ಈ ನಾಟಕದ ಕಥೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ನೈಜ ಘಟನೆ. ಅ ಕಾರಣದಿಂದ ಅಸ್ಪಷ್ಟತೆಗಳು ಹಾಸುಹೊಕ್ಕಾಗಿರಬಹುದು. ಕಥೆಯನ್ನು ನಾಟಕವಾಗಿ ನೋಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಅಥೋಲ್ ಫುಗಾರ್ಡರ್ ಕಟ್ಟಿಕೊಟ್ಟಿದ್ದಾರೆ. ಅ ಮೂಲಕ ಇಡೀ ನಾಟಕ ಸಾಮಾಜಿಕವಾಗಿ ಮಹಿಳೆಯ ಒಂಟಿತನ, ಅಭಿವ್ಯಕ್ತಿಯ ಮಾಧ್ಯಮ, ಧರ್ಮ ಎಂಬಿತ್ಯಾಧಿ ಅಂಶಗಳ ಸುತ್ತ ಸುತ್ತಿ,ಕೊನೆಗೆ ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡುತ್ತದೆ.

ಮುಸ್ತಫ ಕೆ ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ 
ಮಂಗಳಗಂಗೋತ್ರಿ 
ಮಂಗಳೂರು 


ಗುರುವಾರ, ಮಾರ್ಚ್ 19, 2015

ನಮ್ಮ ಕ್ರಿಯೇಟಿವಿಟಿ-ನಾವು ಕ್ರಿಯೇಟರ್ಸ್ ಒಮ್ಮೋಮ್ಮೆ ಟ್ರೆಂಡ್ ಸೆಟ್ಟರ್ಸ್


ಇಂದಿನ ಯುತ್ ಜನರೇಷನ್ ತುಂಬಾನೆ ಫಾಸ್ಟ್ ಅಂಡ್ ಸ್ಮಾರ್ಟ್.ಇತರರಿಗಿಂತ ತಾವು ಭಿನ್ನ ಎಂದು ಗುರುತಿಸಿಕೊಳ್ಳಲು ವಿಭಿನ್ನ ಸಾಹಸಕ್ಕೆ ಕೈ ಹಾಕುವ ಮೂಲಕ ಹೊಸ ಬಗೆಯ ಚಿಂತನೆಗಳಿಗೆ, ಪ್ರಯೋಗಶೀಲತೆಗೆ ಕ್ರಿಯೇಟರ್ಗಳಾಗಿ ಹೊರ ಹೊಮ್ಮವುದನ್ನು ಗುರುತಿಸಬಹುದು.ಸದಾ ತಾವು ಮಾಡುವ ಕೆಲಸದಲ್ಲಿ ಹೊಸತನ್ನು ತರಲು ತುಡಿಯುವ ಯುವ ಮನಸ್ಸುಗಳಿಗೆ ಕ್ಯಾಂಪಸ್ಗಳೆ ಕ್ರಿಯೇಟಿವ್ ಕ್ರಾಂತಿಯ ವೇದಿಕೆ.ಸ್ನೇಹಿತ ವಲಯದೊಂದಿಗೆ ಹರಟೆ,ಚರ್ಚೆಗಳಲ್ಲಿ ತೋಡಗಿಕೊಳ್ಳುವ ಮೂಲಕ ಸಮಾನ ಮನಸ್ಕ ವಿಚಾರಧಾರೆಗಳು ಒಡಮೂಡಿ, ಹೊಸ ಬಗೆಯ ಸವಾಲನ್ನು ಎದುರು ನೋಡುತ್ತಾ ಅದನೆದುರಿಸಲು ಸದಾ ಸಿದ್ದರಿರುತ್ತಾರೆ.ಅಭಿವ್ಯಕ್ತಗೊಂಡ ಹೊಸ ವಿಚಾರವನ್ನು ಎಕ್ಸಿಕ್ಯುಟ್ ಮಾಡಿ ಅದರಿಂದ ಸಫಲತೆಯನ್ನು ಗಳಿಸುತ್ತಾರೆ.
ಒಂದಾನೊಂದು ಕಾಲದಲ್ಲಿ ಸಾಕ್ಷ್ಯ ಚಿತ್ರ (ಡಾಕ್ಯುಮೆಂಟರಿ), ಕಿರುಚಿತ್ರಗಳನ್ನು ಪರಣಿತರು,ಅದಕ್ಕಾಗಿ ರೂಪಿತವಾದ ಫಿಕ್ಷನ್ ಸಂಸ್ಥೆಗಳು ರೂಪಿಸುತ್ತಿದ್ದವು. ಅದರೆ ಇಂದು ಕ್ಯಾಂಪಸ್ನ ಕ್ಯಾಂಟಿನ್ನಲ್ಲಿ ಬಿಸಿ-ಬಿಸಿ ಚಹಾ ಇರುತ್ತಾ ಪ್ರಸ್ತುತ ಸಿನಿಮಾಗಳ ಬಗ್ಗೆ ಕಮೆಂಟ್ಸ್ ಮಾಡುವಾಗ ಅನಿರೀಕ್ಷಿತವಾಗಿ ಸಾಕ್ಷ್ಯ ಚಿತ್ರವನ್ನು ತಾವೇ ತಯಾರಿಸುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಪಡ್ಡೆ ಹೈಕ್ಲು ತಮ್ಮ ಬಳಿ ಇರುವ ಕ್ಯಾಮರಾ, ಲ್ಯಾಪ್ಟಾಫ್ ಬಳಸಿ ತಾವೇ ಸ್ಕ್ರಿಪ್ಟ್ ಬರೆದು, ಎಡಿಟಿಂಗ್ ಮಾಡಿ ಹೆಚ್ಚಿನ ವೆಚ್ಚವಿಲ್ಲದೆ ಸಿಂಪಲ್ಲಾಗಿ, ಗಾಡವಾದ ವಿಚಾರವನ್ನು ತೆರೆಗೆ ತರುತ್ತಾರೆ. ಅ ಮೂಲಕ ಅವರು ತಾಂತ್ರಿಕವಾಗಿಯೂ, ಸಾಹಿತ್ಯಕವಾಗಿಯೂ ಪ್ರಭುದ್ದರಾಗಿ ಸಿನಿಮಾ ಕ್ಷೇತ್ರದ ಕಡೆ ಅಕರ್ಷಿತರಾಗುವುದನ್ನು ಕಾಣಬಹುದು.
ಇನ್ನೂ ಇಂಟರ್ನೇಟ್ ನಮ್ಮಂತಹ ಯುವಕರ ಅಚ್ಚುಮೆಚ್ಚಿನ ಕ್ಷೇತ್ರ. ಸಾಮಾನ್ಯವಾಗಿ ಇತ್ತೀಚೆಗೆ ಯುವಕರು ಹೆಚ್ಚಾಗಿ ವಾಟ್ಸ್ ಅಫ್, ಫೇಸ್ ಬುಕ್ನಲ್ಲಿ ಕಾಲಹರಣ ಮಾಡುತ್ತಾರೆಂಬ ಋಣಾತ್ಮಕ ಅಂಶಗಳು ಕೆಳಿಬರುತ್ತಿದೆಯೇ ಹೊರತು,ಯುವಕರು ಇದೆ ಅನ್ ಲೈನ್ ಜಗತ್ತನ್ನು ಬಳಸಿಕೊಂಡು ಫ್ರೀಲಾನ್ಸ್ ಪತ್ರಕರ್ತರಾಗಿಯು, ಕಂಟೆಂಟ್ ಮತ್ತು ಟೆಕ್ನಿಕಲ್ ರೈಟರ್ ಆಗಿಯು ಕಾರ್ಯನಿರ್ವಹಿಸುತ್ತಿರುವುದನ್ನು ಯಾರು ಗಮನಿಸಲಿಲ್ಲ.ವಿದ್ಯಾರ್ಥಿ ದೀಸೆಯಲ್ಲಿ ಬರವಣಿಗೆಯನ್ನು ಪ್ರಕರವಾಗಿ ಅಭಿವ್ಯಕ್ತಿಸಲು ಅನ್ ಲೈನ್ ತಾಣಗಳು ಸಹಕಾರಿಯಾಗಿದೆ. ಪ್ರತಿ ಲೇಖನಗಳಿಗೂ ಇಂತಿಷ್ಟು ಪ್ರೋತ್ಸಾಹ ಧನ ದೊರೆಯುದರಿಂದ ಬರಹದೊಂದಿಗೆ ಕ್ಯಾಂಪಸ್ನ ಚಿಲ್ಲರೆ ಖಚರ್ುಗಳಿಗೆ ಪಾಕೇಟ್ ಮನಿ ದೊರೆತಂತಾಗುತ್ತದೆ.ಪ್ರಸ್ತುತ ಕಾಲೇಜು ಮಟ್ಟದ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಯುವ ವಿದ್ಯಾರ್ಥಿಗಳು ವಿಭಾಗವಾರು ಬ್ಲಾಗ್ ರಚಿಸಿ ತಮ್ಮ ಲೇಖನ,ಕಥೆ,ವಿಮರ್ಶೆ,ಅಭಿಪ್ರಾಯ,ವರದಿಗಳನ್ನು ಬಿತ್ತರಿಸುವುದನ್ನು ಕಾಣಬಹುದು.
ಅಲ್ಲದೇ ಕ್ಯಾಂಪಸ್ಗಳ ಕಣ್ಗಾವಲಿನಂತೆ ಕಾರ್ಯನಿರ್ವಹಿಸುವ ಪ್ರಾಯೋಗಿಕ ವಿದ್ಯಾರ್ಥಿ ಭಿತ್ತಿ ಪತ್ರಿಕೆಗಳನ್ನು,ವಾರ್ಷಿ ಕಾಂಕಗಳನ್ನು ಸಮಾನ ಮನಸ್ಕ ಯುವಕರು ಅಸಕ್ತಿ ಮತ್ತು ಮುತುವರ್ಜಿಯಿಂದ ಪ್ರಾರಂಭಿಸಿ, ಹೆಚ್ಚಿನ ಯಶಸ್ಸನ್ನು ಗಳಿಸಿಕೊಂಡಿರುವುದನ್ನು ಕಾಣಬಹುದಾಗಿದೆ.ಅ ಮೂಲಕ ಅವರಲ್ಲಿ ಸಂಪಾದಕ, ಉಪಸಂಪಾದಕ, ವಿನ್ಯಾಸಕಾರ, ಹಾಗೂ ಉತ್ತಮ ಬರಹಗಾರರು  ಹುಟ್ಟಿಕೊಳ್ಳಲು ಸಾಧ್ಯ.
ಹುಚ್ಚು ಮನಸ್ಸಿನ ಹೊಳೆಯಲ್ಲಿ ಜಾಲಿ ಮೂಡಿನ ಯುವ ಸಮೂಹ ತಮ್ಮ ಸಾಹಸ ಮತ್ತು ಫ್ರೌಡಿಮೆಯನ್ನು ಪ್ರದರ್ಶಿ ಸುವ ಸಲುವಾಗಿ ಹಳೆ ಮಾದರಿಯ ಬುಲೆಟ್ ಬೈಕ್ಗಳನ್ನು ರಂಗು ರಂಗು ಬಣ್ಣಗಳಿಂದ ಕಂಗೋಳಿಸುವಂತೆ ಮಾಡಿ ಸಾವಿರಾರು ಮೈಲು ದೂರಗಳವರೆಗೆ ಕ್ರಮಿಸಿ ಸಾಹಸ ಮೆರೆಯುತ್ತಾರೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೇಸ್ಗಳಲ್ಲಿ ಭಾಗವಹಿಸುವ ಯುತ್ಸ್ಗಳನ್ನು ಕಾಣಬಹುದು.ತಮ್ಮ ಸಂಗಡಿಗರೊಂದಿಗೆ ಬೆಟ್ಟ ಗುಡ್ಡ,ಕಾಡು ಮೇಡುಗಳಿಗೆ ತೆರಳಿ ಟ್ರಕಿಂಗ್ ಎಂಬ ಸಾಧನೆಯ ಹಾದಿಯನ್ನು ತುಳಿಯುತ್ತಾರೆ.ಇದಕ್ಕೆಲ್ಲ ಸ್ನೇಹಿತರೆಂಬ ಒಕ್ಕೂಟ ವ್ಯವಸ್ಥೆಯೆ ಕಾರಣ. ದೇಶ ಸುತ್ತು ಕೋಶ ಓದು ಎಂಬ ತತ್ವ ಚಿಂತನೆಗಳನ್ನು ಆಧುನಿಕ ಯುವ ಸಮೂಹ ಚಾಚು ತಪ್ಪದೆ ಪಾಲಿಸುವ ಮೂಲಕ, ನೈತಿಕವಾಗಿ ಯುವ ಸಮೂಹ ಪ್ರಬುಧ್ಧಗೊಳ್ಳುವುದನ್ನು ಕಾಣಬಹುದು.
ದಿನದಿಂದ ದಿನಕ್ಕೆ ಬಣ್ಣಗಳ ಕಡೆಗೆ ಯುವಕರು ಹೆಚ್ಚು ಅಕರ್ಷಿತರಾಗುತ್ತಿದ್ದಾರೆ. ಸ್ಪ್ರೇ ಪೆಂಟ್ಗಳನ್ನು ಬಳಸಿಕೊಂಡು ರಸ್ತೆಯ ಮೇಲೆ, ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಒಡಮೂಡಿಸುವ ಯುವಕರ ಈ ಅಸಕ್ತಿಗೆ ಸ್ಟ್ರೀಟ್ಪೆಂಟ್ ಎಂದು ಹೆಸರು. ವಿದೇಶದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಈ ಕಲೆಯನ್ನು ಭಾರತದ ವಿದ್ಯಾರ್ಥಿಗಳು ಕಲಿತು ಹಲವಾರು ಕ್ಯಾಂಪಸ್ಗಳ ಸೌಂದರ್ಯ ಹೆಚ್ಚಿಸಿದ್ದಾರೆ.
ಸಾಹಿತ್ಯ ಮಾತ್ರವಲ್ಲದೆ ಸಂಗೀತದ ಹಳೆಯ ಪರಿಕಲ್ಪನೆಗೆ ಹೊಸ ಬಗೆಯ ಕಾಯಕಲ್ಪವನ್ನು ನೀಡಿರುವ ಕ್ಯಾಂಪಸ್ ಸಿಂಗರ್ಸ್ಗಳು ತಮ್ಮದೆ ಅದ ಬ್ಯಾಂಡ್ಗಳನ್ನು ಕಟ್ಟಿಕೊಂಡು,ತಾವೇ ಬರೆದ ಸಾಹಿತ್ಯಕ್ಕೆ ತಾವೇ ಸಂಗೀತ ನೀಡಿ,ತಮ್ಮ ದ್ವನಿಯಲ್ಲಿಯೇ ಹಾಡಿ ಪಾಪ್ಯೂಲರ್ ಅದ ಎಷ್ಟೊ ಘಟನೆಗಳು ನಮ್ಮ ಸುತ್ತಲಿದೆ.ಬ್ಯಾಂಡ್ಗಳು ನೀಡುವ ಕಾರ್ಯಕ್ರಮದಿಂದ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ವಿವಿಧ ಉದ್ದೇಶಗಳಿಗಾಗಿ ಬಳಸುವುದನ್ನು ಕಾಣಬಹುದು.ಇಷ್ಟು ಮಾತ್ರವಲ್ಲದೆ ಕ್ಯಾಂಪಸ್ಗಳಲ್ಲಿ ರಾಜಕೀಯ ಚಿಂತನೆಗಳ ಕಡೆಗೂ ವಿದ್ಯಾರ್ಥಿಗಳು ಒಲವನ್ನು ತೋರಿಸುತ್ತಿದ್ದಾರೆ. ಅ ಮೂಲಕ ಮತದಾನದಂತಹ ಪ್ರಕಿಯೇಗಳಲ್ಲಿ, ಮತದಾನಕ್ಕಾಗಿ ಇತರರನ್ನು ಪ್ರೋತ್ಸಾಹಿಸುವ ಜನಜಾಗೃತಿಯ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕೆಲವೊಮ್ಮೆ ಕ್ಯಾಂಪಸ್ಗಳಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಪ್ರತಿಭಟನೆಗಳು ಸಂಭವಿಸಿದಾಗ ಕ್ರಿಯೇಟಿವ್ ಸ್ಲೋಗನ್ಸ್, ಮತ್ತು ವಿಭಿನ್ನ ವೇಶಭೂಷಣಗಳ ಮೂಲಕ ಪ್ರತಿಭಟಿಸುವ ಕಲಾತ್ಮಕವಾದ ಮುಷ್ಕರಗಳನ್ನು,ರಸ್ತೆ ಸಪ್ತಾಹಗಳನ್ನು ಆಧುನಿಕ ಯುವ ಸಮೂಹ ರೂಪಿಸುವುದನ್ನು ಗಮನಿಸಬಹುದು.
ಒಟ್ಟಿನಲ್ಲಿ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ನಾಟಕ, ಕಲೆ, ಪ್ರವಾಸ, ಬರಹ, ಚಿತ್ರಕಲೆ, ಇತ್ಯಾದಿ ಅಂಶಗಳನ್ನು ತಮ್ಮ ಕ್ರಿಯೇಟಿವ್ ಚಿಂತನೆಗಳ ಮುಖವಾಣಿಯಾಗಿಸಿ ತಮ್ಮ ಪ್ರತಿಭೆಗಳನ್ನು ಅಭಿವ್ಯಕ್ತಿಸುವ ಕ್ಯಾಂಪಸ್ ಚಿಂತಕರ ಟ್ಯಾಲೆಂಟ್ಸ್ಗಳನ್ನು ಇಲ್ಲಿ ಸ್ಮರಿಸಿಕೊಳ್ಳಲೆ ಬೇಕು. ಇದು ವಿದ್ಯಾರ್ಥಿಗಳ ಭೌದ್ಧಿಕ ಸ್ವಾವಲಂಬನೆಯ ಪ್ರತೀಕವೆಂದರೆ ತಪ್ಪಾಗಲಾರದು.

ಮುಸ್ತಫ .ಕೆ ಹೆಚ್,
ಪ್ರಥಮ ಎಂ ಎ ಕನ್ನಡ ವಿಭಾಗ,
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ,
ಮಂಗಳಗಂಗೋತ್ರಿ,
ಮಂಗಳೂರು