ಸೋಮವಾರ, ಮಾರ್ಚ್ 23, 2015

ಮೆಕ್ಕಾ ದಾರಿಯಲ್ಲಿ ಒಡಮೂಡಿದ ಬೆಳಕಿನ ಜ್ಞಾನ - ನಾಟಕ ವಿಮರ್ಶೆ

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಅಯೋಜಿಸಿದ ಬಹುಭಾಷಾ ಲೇಖಕಿಯರ ಸಮಾವೇಶದಲ್ಲಿ ಮೆಕ್ಕಾ ದಾರಿ ಎಂಬ ಅನುವಾದಿತ ನಾಟಕ ರಂಗಪ್ರಯೋಗಗೊಂಡಿತು. ದಕ್ಷಿಣ ಅಫ್ರಿಕಾದ ಖ್ಯಾತ ನಾಟಕಕಾರ ಅಥೋಲ್ ಫುಗಾರ್ಡರ ದಿ ರೋಡ್ ಟು ಮೆಕ್ಕಾ ನಾಟಕವನ್ನು ಕನ್ನಡಕ್ಕೆ ಖ್ಯಾತ ರಂಗಕರ್ಮಿ ಪ್ರಸನ್ನರವರು ಅನುವಾದಿಸಿ ನಿರ್ದೇಶಿಸಿದ್ದಾರೆ. ಈ ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ತರಿಕಿಟ ಕಲಾ ಕಮ್ಮಟದ ಸಾರಥ್ಯದಲ್ಲಿ ನಿರೂಪಣೆಗೊಂಡತು.

ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿರುವ ಹಳ್ಳಿಗಾಡಿನ ಒಂಟಿ ಅನಾಥ ವಿಧವೆ ವೃದ್ಧೆ ಹೆಲನ್ ನಾಟಕದ ನಾಯಕಿ. ಆಕೆಯ ಏಕಾಂಗಿತನದ ಅಭಿವ್ಯಕ್ತಿಯ ನೆಲೆಯಾಗಿ ರೂಪುಗೊಂಡ ವಿಭಿನ್ನ ಅಯಾಮವೇ ಕಲೆ. ಕಲಾ ಸೃಷ್ಟಿಯ ಮೂಲಕ ಬೆಳಕಿನ ಹುಡುಕಾಟದಲ್ಲಿ ತೊಡಗುವ ಹೆಲನ್ ಸಿಮೆಂಟು, ಮರಳು, ಪಿಂಗಾಣಿಯನ್ನು ಬಳಸಿ ಗೂಬೆ, ಒಂಟೆ, ನವಿಲು ಮುಂತಾದ ಅನೇಕ ಜನಪದೀಯ ಕಲಾ ಸೃಷ್ಟಿಯನ್ನು ತನ್ನ ಮನೆಯಲ್ಲಿ ನಿರ್ಮಿಸುತ್ತಾಳೆ. ಬೆಳಕು ಕಲಾಕೃತಿಯ ಮೇಲೆ ಪ್ರತಿಫಲಿಸಿದಾಗ ಜ್ಞಾನವನ್ನು ಹುಡುಕುವ ಜ್ಞಾನವೃದ್ಧರಂತೆ ಪಶ್ಚಿಮದ ಮೆಕ್ಕಾ ನಗರದ ಕಡೆ ಹೊರಟಂತೆ ಕಲಾಕೃತಿಗಳು ಗೋಚರಿಸುತ್ತದೆ. ಅ ಕಲಾ ಕೃತಿಗಳ ರಚನೆಯ ಮೂಲಕ ಒಂಟಿತನದ ಬೇಗೆಯಿಂದ ಹೊರಬರಲು ಯತ್ನಿಸುವ ಹೆಲನ್, ಗ್ರಾಮದ ಸಂಪ್ರದಾಯಸ್ಥ ಕ್ರೈಸ್ತ ಮತಸ್ಥರ ಕಣ್ಣಲ್ಲಿ ಧರ್ಮಭ್ರಷ್ಟಳಾಗಿ ಗುರುತಿಸಿಕೊಳ್ಳುತ್ತಾಳೆ. ಅಕೆಯನ್ನು ಸಂಶಯದಿಂದ ಕಾಣುವ ಅಲ್ಲಿನ ಜನರು ಹೇಗಾದರು ಮಾಡಿ ಹೆಲನಳ ಅಸ್ತಿ ಕಬಳಿಸಿ, ವೃದ್ದಾಶ್ರಮಕ್ಕೆ ತಳ್ಳುವ ಉನ್ನಾರ ಮಾಡಿದರು.ಅದಕ್ಕಾಗಿ ಪಾದ್ರಿ ಮಾರಿಯಸ್ ಹೆಲನಳ ಮೇಲೆ ತುಂಬಾ ಕರುಣೆ ತೋರುವವನಂತೆ ನಟಿಸುತ್ತಾನೆ.ಸದ್ದಿಲ್ಲದೆ ಗ್ರಾಮದ ಜನ ಆಕೆಯ ಮನೆಗೆ ಬೆಂಕಿ ಹಚ್ಚುವುದು,ಕಲ್ಲು ಹೊಡೆಯುವುದನ್ನು ಮಾಡಿ ಬೇದರಿಸುತ್ತಾರೆ.ಅಕೆಗೆ ಹುಚ್ಚಿಯ ಪಟ್ಟ ಕಟ್ಟಿ ಯಾರು ಅಕೆಗೆ ಸಹಾಯ ಮಾಡದಂತೆ ಯೋಜನೆ ರೂಪಿಸಲಾಗುತ್ತದೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಈ ಎಲ್ಲಾ ವಂಚನೆಯನ್ನು  ಮುದುಕಿ ಹೆಲೆನಳ ಅಕ್ಷರಸ್ಥ ಗೆಳತಿ ಎಲ್ಸಿ ಬಯಲುಗೊಳಿಸುತ್ತಾಳೆ.ಇದರಿಂದ ಅತ್ಮ ಸ್ಥೈರ್ಯ ಪಡೆದ ಹೆಲನ್ ಪಾದರ್ ಮಾರಿಯಸ್ ನೀಡಿದ ವೃದ್ಧಾಶ್ರಮ ಪ್ರವೇಶ ಪತ್ರಕೆ ಸಹಿಹಾಕದೆ ನಿರಾಕರಿಸುತ್ತಾಳೆ. ಅ ಮೂಲಕ ಮಹಿಳಾ ಶೋಷಣೆಗೆ ಪ್ರತಿ ದ್ವನಿಯನ್ನು ಹೆಲನ್ ಅಭಿವ್ಯಕ್ತಿಸುವುದನ್ನು ಕಾಣಬಹುದು.
ದಲಿತ ಮತ್ತು ಮಹಿಳಾ ಪರ ಹೊರಾಟಗಾರ್ತಿ ದು.ಸರಸ್ವತಿಯವರು ಹೆಲನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.ಪಕ್ಕಾ ಗ್ರಾಮೀಣ ಅನಕ್ಷರಸ್ಥ ವೃದ್ಧ ಮಹಿಳೆಯಂತೆ ಕಂಗೊಳಿಸುವ ಅವರ ಅಭಿನಯ ಜೀವಪರವಾದ ಮುಗ್ಧತೆಯಿಂದ ಹಾಸುಹೊಕ್ಕಾಗಿದೆ. ದಕ್ಷಿಣ ಕನ್ನಡದ ಮೇರು ಪ್ರತಿಭೆ ವಾಣಿ ಪರಿಯೋಡಿಯವರು ಮುದುಕಿ ಹೆಲನಳ ಗೆಳತಿ ಎಲ್ಸಿಯ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ. ಗ್ಲಾಮರಸ್ ಗೊಂಬೆಯಂತೆ ಕಂಗೊಳಿಸುವ ವಾಣಿಯವರ ಹಾವ-ಭಾವ ಯುವಕರ ಮನಸ್ಸನ್ನು ಸೇಳೆಯುದರಲ್ಲಿ ಸಂಶಯವಿಲ್ಲ. ಖಳನಾಯಕನಂತೆ ಎಂಟ್ರಿಕೊಡುವ ಪಾದ್ರಿ ಮಾರಿಯಸ್ ಪಾತ್ರವನ್ನು ಚಿತ್ರ ನಟ ಚಂದ್ರಹಾಸ್ ಉಳ್ಳಾಲ್ ರವರು ಮನೋಜ್ಞವಾಗಿ ಅಭಿನಯಿಸುವ ಮೂಲಕ ಇಡೀ ನಾಟಕವನ್ನು ವರ್ಣರಂಜಿತ ಕತ್ತಲು-ಬೆಳಕಿನ ನಡುವೆ ಮಂತ್ರ ಮುಗ್ದಗೊಳಿಸಿದ್ದಾರೆ.

ಛಾಯಾ ಚಿತ್ರ-ಎಂ.ಬಿ.ಚಂದ್ರಶೇಖರ್ ಮಂಗಳೂರು ವಿಶ್ವವಿದ್ಯಾನಿಲಯ
ಹೆಲನ್ ಮತ್ತು ಎಲ್ಸಿ ಪಾತ್ರಗಳು ಇಡೀ ನಾಟಕದುದ್ದಕ್ಕೂ ಭಿನ್ನ ಅಯಾಮದಿಂದ ಗುರುತಿಸಲ್ಪಡುತ್ತದೆ. ಹೆಲನ್ ಅನಕ್ಷರಸ್ಥ  ಗ್ರಾಮೀಣ ಮಹಿಳೆ. ಎಲ್ಸಿ ನಗರ ಸಂಸ್ಕೃತಿಯ ಅಕ್ಷರಸ್ಥ ಮಹಿಳೆ.ಅದರೂ ಸಂಪ್ರದಾಯಸ್ಥ ಪುರುಷ ಸಮಾಜದಿಂದ ಹೆಲನ್ ಬಚಾವಾಗುತ್ತಾಳೆ.ಎಲ್ಸಿಯ ಕಥೆ ಅಗಲ್ಲ, ಅಷ್ಟೊಂದು ವಿದ್ಯಾಭ್ಯಾಸ ಪಡೆದು ಶಿಕ್ಷಿತಳಾಗಿದ್ದರು ವಿವಾಹಿತ ಪುರುಷನೊಂದಿಗೆ ಸಂಬಂಧಹೊಂದಿ ಗರ್ಭದರಿಸಿ,ಗರ್ಭಪಾತ ಮಾಡಿಸಿಕೊಳ್ಳುವ ಸನ್ನಿವೇಶವನ್ನು ಗಮನಿಸಬಹುದು. ಇದು ಒಂದು ರೀತಿ ತಿಳಿದು ತಿಳಿದು ಮಹಿಳಾ ಶೋಷಣೆಗೆ ತಮ್ಮನ್ನು ಒಡ್ಡಿಕೊಳ್ಳುವ ಸ್ಥಿತಿ ಎಂದರೆ ತಪ್ಪಾಗಲಾರದು.
ನಾಟಕದ ಇನ್ನೊಂದು ಅಯಾಮವು ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣ ಭೇದ ನೀತಿಯನ್ನು, ಅಂದಿನ ಕ್ರೈಸ್ತ ಮತ ಮತ್ತು ಚರ್ಚೆ ಬಿಳಿಯರ ಪರವಾಗಿತ್ತೆಂಬುದನ್ನು ಪ್ರತಿಪಾದಿಸುತ್ತದೆ.ಕಥಾ ಹಂದರದ ಬಗ್ಗೆ ಪ್ರೆಕ್ಷಕರಿಗೆ ಹಲವಾರು ಪ್ರಶ್ನೆಗಳು ಉದ್ಬವಿಸುವುದು ಸಹಜ. ತನ್ನ ಮನೆ ಬಿಟ್ಟು ಹೊರ ಜಗತ್ತಿನ ಬಗ್ಗೆ ತಿಳುವಳಿಕೆ ಇರದ ಹೆಲೆನ್ಗೆ ಮೆಕ್ಕಾದ ಜನರು ಜಾಣರು,ಜ್ಞಾನ ವೃದ್ದರಾಗಿ ಕಂಡದ್ದು ಹೇಗೆ?ಅಕೆ ಎಂದು ಮೆಕ್ಕಾ ಪ್ರಯಾಣ ಮಾಡಿರಲಿಲ್ಲ.ಅದರೂ ಅಕೆಯ ಕಲಾಕೃತಿಗಳು ಪಶ್ಚಿಮದ ಕಡೆ ಹೊರಟ ಮೆಕ್ಕಾ ದಾರಿಯಲ್ಲಿ ಪ್ರಯಾಣಿಸುವ ಒಂಟೆ, ನವಿಲು, ಜ್ಞಾನ ವೃದ್ಧರಂತೆ ಕಂಗೊಳಿಸಿದವು. ನಾಟಕದ ಕೊನೆಯಲ್ಲಿ ಪಾದ್ರಿ ಮಾರೆಸಸ್ ಸಹ ಮೆಕ್ಕಾವನ್ನು ನಕ್ಷೆಯಲ್ಲಿ ನೋಡಿ ಗುರುತಿಸುವುದಾಗಿ ನುಡಿಯುತ್ತಾನೆ.ಒಟ್ಟಿನಲ್ಲಿ ಕೆಲವಾರು ಅಸ್ಪಷ್ಟತೆಗಳು ನಾಟಕದ ಕಥಾ ಹಂದರದಲ್ಲಿ ಅಭಿವ್ಯಕ್ತವಾಗಿದೆ.
ಒಟ್ಟಿನಲ್ಲಿ ಈ ನಾಟಕದ ಕಥೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ನೈಜ ಘಟನೆ. ಅ ಕಾರಣದಿಂದ ಅಸ್ಪಷ್ಟತೆಗಳು ಹಾಸುಹೊಕ್ಕಾಗಿರಬಹುದು. ಕಥೆಯನ್ನು ನಾಟಕವಾಗಿ ನೋಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಅಥೋಲ್ ಫುಗಾರ್ಡರ್ ಕಟ್ಟಿಕೊಟ್ಟಿದ್ದಾರೆ. ಅ ಮೂಲಕ ಇಡೀ ನಾಟಕ ಸಾಮಾಜಿಕವಾಗಿ ಮಹಿಳೆಯ ಒಂಟಿತನ, ಅಭಿವ್ಯಕ್ತಿಯ ಮಾಧ್ಯಮ, ಧರ್ಮ ಎಂಬಿತ್ಯಾಧಿ ಅಂಶಗಳ ಸುತ್ತ ಸುತ್ತಿ,ಕೊನೆಗೆ ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡುತ್ತದೆ.

ಮುಸ್ತಫ ಕೆ ಹೆಚ್
ಪ್ರಥಮ ಎಂ ಎ ಕನ್ನಡ ವಿಭಾಗ
ಎಸ್ ವಿ ಪಿ.ಕನ್ನಡ ಅಧ್ಯಯನ ಸಂಸ್ಥೆ 
ಮಂಗಳಗಂಗೋತ್ರಿ 
ಮಂಗಳೂರು 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ